ADVERTISEMENT

ಹಗೆತನದಿಂದ ಯಾರಿಗೂ ಪ್ರಯೋಜನವಿಲ್ಲ: ಇರಾನ್ ಮೇಲಿನ ಇಸ್ರೇಲ್ ದಾಳಿಗೆ ಭಾರತ ಕಳವಳ

ಪಿಟಿಐ
Published 27 ಅಕ್ಟೋಬರ್ 2024, 2:51 IST
Last Updated 27 ಅಕ್ಟೋಬರ್ 2024, 2:51 IST
   

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಳ್ಳುತ್ತಿರುವ ಉದ್ವಿಗ್ನತೆ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಉಭಯ ದೇಶಗಳು(ಇರಾನ್ ಮತ್ತು ಇಸ್ರೇಲ್) ಸಂಘರ್ಷದಿಂದ ದೂರ ಉಳಿದು, ಸಂಯಮ ಕಾಪಾಡಿ, ಮಾತುಕತೆ ಹಾಗೂ ರಾಜತಾಂತ್ರಿಕ ಮಾರ್ಗಗಳಿಗೆ ಮರಳಬೇಕು ಎಂದು ಭಾರತ ಕರೆ ನೀಡಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA), ಈ ಪ್ರಾಂತ್ಯದಲ್ಲಿನ ಭಾರತೀಯ ಸಮುದಾಯದೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದೂ ತಿಳಿಸಿದೆ.

ಶನಿವಾರ ಇರಾನ್‌ನ ಸೇನಾ ನೆಲೆಗಳ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದೆ. ಇದರಿಂದ ಎರಡು ಭಾರಿ ಶಸ್ತ್ರಸಜ್ಜಿತ ದೇಶಗಳ ನಡುವೆ ಪೂರ್ಣ ಪ್ರಮಾಣದ ಯುದ್ಧ ನಡೆಯುವ ಭೀತಿ ಎದುರಾಗಿದೆ. ಈ ಬೆನ್ನಲ್ಲೇ ಭಾರತದಿಂದ ಈ ಹೇಳಿಕೆ ಹೊರಬಿದ್ದಿದೆ.

ADVERTISEMENT

ಇರಾನ್ ವಿರುದ್ಧದ ಸೇನಾ ಕಾರ್ಯಾಚರಣೆ ಮುಕ್ತಾಯಗೊಂಡಿದೆ ಎಂದು ಇಸ್ರೇಲ್ ಶನಿವಾರ ಹೇಳಿದೆ. ಇದೇ ತಿಂಗಳ ಆರಂಭದಲ್ಲಿ ಇಸ್ರೇಲ್‌ ವಿರುದ್ಧ ಇರಾನ್‌ ಕ್ಷಿಪಣಿ ದಾಳಿ ನಡೆಸಿತ್ತು. ಇರಾನ್‌ ಬೆಂಬಲಿತ ಹಿಜ್ಬುಲ್ಲಾ ನಾಯಕರನ್ನು ಲೆಬನಾನ್‌ನಲ್ಲಿ ಹತ್ಯೆ ಮಾಡಿದ ಬಳಿಕ ಈ ದಾಳಿ ಸಂಘಟಿಸಲಾಗಿತ್ತು. ಇದು ಕಳೆದ ಆರು ತಿಂಗಳಲ್ಲಿ, ಇಸ್ರೇಲ್‌ ಮೇಲೆ ಇರಾನ್‌ ನಡೆಸಿದ ಎರಡನೇ ನೇರ ದಾಳಿಯಾಗಿತ್ತು.

ಇರಾನ್‌ ರಾಜಧಾನಿ ಟೆಹ್ರಾನ್ ಸಮೀಪ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ. ಕ್ಷಿಪಣಿ, ಡ್ರೋನ್‌ ನೆಲೆಗಳು ಹಾಗೂ ತಯಾರಿಕಾ ಕೇಂದ್ರಗಳನ್ನು ಗುರಿಯಾಗಿಸಿ ಎರಡು ಹಾಗೂ ಮೂರನೇ ಸುತ್ತಿನ ದಾಳಿ ಸಂಘಟಿಸಲಾಗಿದೆ ಎಂದು ಇಸ್ರೇಲ್‌ ಹೇಳಿದೆ.

ಉಭಯ ದೇಶಗಳು ಸಂಘರ್ಷದಿಂದ ದೂರ ಉಳಿದು, ಮಾತುಕತೆ ಹಾಗೂ ರಾಜತಾಂತ್ರಿಕ ಮಾರ್ಗಕ್ಕೆ ಮರಳಬೇಕು. ಹಗೆತನದಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ. ಇದರಿಂದ ಅಮಾಯಕ ಒತ್ತೆಯಾಳುಗಳು ಹಾಗೂ ನಾಗರಿಕರು ತೊಂದರೆಗೊಳಗಾಗುತ್ತಿದ್ದಾರೆ ಎಂದು ಭಾರತ ಕಳವಳ ವ್ಯಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.