ADVERTISEMENT

ಅಯೋಧ್ಯೆಯಲ್ಲಿ 4 ದಿನಗಳ ದೀಪೋತ್ಸವ ಅ. 28ರಿಂದ: ಬೆಳಗಲಿವೆ 25 ಲಕ್ಷ ದೀಪಗಳು

ಪಿಟಿಐ
Published 3 ಸೆಪ್ಟೆಂಬರ್ 2024, 13:09 IST
Last Updated 3 ಸೆಪ್ಟೆಂಬರ್ 2024, 13:09 IST
<div class="paragraphs"><p> ಅಯೋಧ್ಯೆಯ ರಾಮ ಮಂದಿರ</p></div>

ಅಯೋಧ್ಯೆಯ ರಾಮ ಮಂದಿರ

   

ಲಖನೌ: ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡ ಬಾಲರಾಮನ ದೇವಾಲಯದಲ್ಲಿ ಅ. 28ರಿಂದ ನಾಲ್ಕು ದಿನಗಳ ಕಾಲ ದೀಪೋತ್ಸವ ಸಂಭ್ರಮ ನಡೆಯಲಿದೆ. 

‘ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನೆರವೇರಿತ್ತು. ಇದೀಗ ಅ. 28ರಿಂದ 31ರವರೆಗೆ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು, 25 ಲಕ್ಷಕ್ಕೂ ಅಧಿಕ ಹಣತೆಗಳನ್ನು ಅಯೋಧ್ಯೆಯ ವಿವಿಧ ಘಾಟ್‌ಗಳು, ರಾಮ್‌ ಕಿ ಪೈದಿ ಹಾಗೂ ನಯಾ ಘಾಟ್‌ನಲ್ಲಿ ಬೆಳಗಲಾಗುವುದು’ ಎಂದು ಉತ್ತರ ಪ್ರದೇಶ ಸರ್ಕಾರ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ADVERTISEMENT

‘ಈ ಬಾರಿ ದೀಪೋತ್ಸವದಲ್ಲಿ ಆಧುನಿಕ ಬಗೆಯ ಹಾಗೂ ವಿಭಿನ್ನ ಬಗೆಯ ದೀಪಗಳನ್ನು ಬೆಳಗುವ ಮೂಲಕ ಇಡೀ ನಗರವನ್ನು ದೃಶ್ಯ ವೈಭವದಲ್ಲಿ ಕಟ್ಟಿಕೊಡಲಾಗುವುದು. ಬಣ್ಣಬಣ್ಣಗಳ ಎಲ್‌ಇಡಿ ದೀಪಗಳು ಹಾಗೂ ಮಲ್ಟಿಮೀಡಿಯಾ ಪ್ರೊಜೆಕ್ಷನ್‌ಗಳನ್ನು ಮುಖ್ಯ ವೇದಿಕೆ ಹಾಗೂ ನಗರದ ವಿವಿಧ ಭಾಗಗಳಲ್ಲಿ ಅಳವಡಿಸಲಾಗುವುದು’ ಎಂದಿದೆ.

‘ಮುಖ್ಯ ದ್ವಾರದಲ್ಲಿ ಹೊಸ ಪರಿಕಲ್ಪನೆಯಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗುವುದು. ರಾಮ್‌ ಕಿ ಪೈದಿ, ನಯಾ ಘಾಟ್‌, ಭಕ್ತಿ ಪಥ ಹೀಗೆ ಪ್ರಮುಖ ಸ್ಥಳಗಳು ದೀಪ ಹಾಗೂ ಹೂವಿನ ಅಲಂಕಾರದಿಂದ ಕಂಗೊಳಿಸಲಿವೆ. ಗೊಂಡಾ ಸೇತುವೆ, ಬಸ್ತಿ ಸೇತುವೆಗಳಿಗೂ ವಿಭಿನ್ನ ಬಗೆಯ ದೀಪಾಲಂಕಾರಕ್ಕೆ ಯೋಜನೆ ರೂಪಿಸಲಾಗಿದೆ. ಮುಖ್ಯ ದೇಗುಲ ಸಹಿತ ಅಯೋಧ್ಯೆಯ 500 ಸ್ಥಳಗಳನ್ನು ದೀಪಾಲಂಕಾರದಿಂದ ಸಿಂಗರಿಸಲು ನಿರ್ಧರಿಸಲಾಗಿದೆ’ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ.

‘ಪ್ರತಿ ದಿನವೂ ವಿಭಿನ್ನ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಅಯೋಧ್ಯೆಯ ಹಲವೆಡೆ ಸ್ಥಾಪಿಸಲಾಗುವ ವೇದಿಕೆಗಳಲ್ಲಿ ನೂರಕ್ಕೂ ಹೆಚ್ಚು ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ. ಇವುಗಳು ಭಗವಾನ್ ರಾಮನ ಬದುಕು ಹಾಗೂ ಸಂದೇಶಗಳನ್ನು ಆಧರಿಸಿರುತ್ತವೆ’ ಎಂದಿದೆ.

‘ಇವುಗಳನ್ನು ಹೊರತುಪಡಿಸಿ ಲೇಸರ್ ಪ್ರದರ್ಶನ, ಪರಿಸರ ಸ್ನೇಹಿ ಸಿಡಿಮದ್ದು ಪ್ರದರ್ಶನ ನಡೆಯಲಿದೆ. ರಾಮಜನ್ಮಭೂಮಿ ದೇಗುಲ, ಹನುಮಾನ್ ಘರ್, ನಾಗೇಶ್ವರನಾಥ್ ದೇವಾಲಯ, ರಾಮ್‌ ಕಿ ಪೈದಿ ಸೇರಿದಂತೆ ಅಯೋಧ್ಯೆಯ ದೇವಾಲಯಗಳಲ್ಲಿ ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ ಆರಂಭಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.