ADVERTISEMENT

ಆಗ ಸೋಲಿನ ರುಚಿ..ಈಗ CM ಕುರ್ಚಿ:ರಾಜಕಾರಣದ ಹಾವು–ಏಣಿಯಾಟದಲ್ಲಿ ಮತ್ತೆ ಗೆದ್ದ ಒಮರ್

ಪಿಟಿಐ
Published 16 ಅಕ್ಟೋಬರ್ 2024, 22:30 IST
Last Updated 16 ಅಕ್ಟೋಬರ್ 2024, 22:30 IST
ಒಮರ್‌ ಅಬ್ದುಲ್ಲಾ
ಒಮರ್‌ ಅಬ್ದುಲ್ಲಾ   

ಶ್ರೀನಗರ: ನಾಲ್ಕು ತಿಂಗಳ ಅವಧಿಯಲ್ಲಿ ಒಮರ್ ಅಬ್ದುಲ್ಲಾ ಅವರು ತಮ್ಮ ರಾಜಕೀಯ ಜೀವನದಲ್ಲಿ ಸೋಲಿನ ರುಚಿ ಉಂಡಿದ್ದಾರೆ. ಈಗ ಮತ್ತೆ ಮುಖ್ಯಮಂತ್ರಿಯಾಗುವ ಮೂಲಕ ಗೆಲುವಿನ ನಗೆಯನ್ನೂ ಬೀರಿದ್ದಾರೆ.

ಜೂನ್‌ನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಒಮರ್‌ ಅಬ್ದುಲ್ಲಾ ಗೆಲುವು ಸಾಧಿಸಲಿಲ್ಲ. ಪಕ್ಷದ ಸಾಧನೆಯೂ ಅಷ್ಟಕಷ್ಟೆ. ಆದರೆ, ಇತ್ತೀಚೆಗೆ ಜಮ್ಮು–ಕಾಶ್ಮೀರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಪಕ್ಷಕ್ಕೆ ಭರ್ಜರಿ ಗೆಲುವು ತಂದುಕೊಟ್ಟ ಅವರಿಗೆ ಮತ್ತೊಮ್ಮೆ ಸಿ.ಎಂ ಪಟ್ಟ ದಕ್ಕಿದೆ.

ಜಮ್ಮು–ಕಾಶ್ಮೀರ ರಾಜಕಾರಣದಲ್ಲಿ ಪ್ರಭಾವ ಹೊಂದಿರುವ ಅಬ್ದುಲ್ಲಾ ವಂಶದ ಕುಡಿ, 54 ವರ್ಷದ ಒಮರ್‌, ಬುಧವಾರ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ತಾತ ಶೇಖ್‌ ಅಬ್ದುಲ್ಲಾ, ತಂದೆ ಫಾರೂಕ್‌ ಅಬ್ದುಲ್ಲಾ ಕೂಡ ಮುಖ್ಯಮಂತ್ರಿಯಾಗಿದ್ದರು.

ADVERTISEMENT

ಒಮರ್‌ ಅವರು 2009–2014ರವರೆಗೆ ಆಗಿನ ಜಮ್ಮು–ಕಾಶ್ಮೀರ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.

ಜೂನ್‌ನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಾರಾಮುಲ್ಲಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಒಮರ್‌, ಸ್ವತಂತ್ರ ಅಭ್ಯರ್ಥಿ ಅಬ್ದುಲ್‌ ರಶೀದ್‌ ಶೇಖ್‌ ವಿರುದ್ಧ ಪರಾಭವಗೊಂಡು ಮುಜುಗರ ಅನುಭವಿಸಿದ್ದರು. 

ಎಂಜಿನಿಯರ್‌ ರಶೀದ್‌ ಎಂದೇ ಜನಪ್ರಿಯರಾಗಿರುವ ಅಬ್ದುಲ್‌ ರಶೀದ್‌, 2 ಲಕ್ಷಕ್ಕೂ ಅಧಿಕ ಮತಗಳಿಂದ ಒಮರ್‌ ಅವರನ್ನು ಸೋಲಿಸಿದ್ದರು.

ನಂತರದಲ್ಲಿ, ಇತರ ಪಕ್ಷಗಳು ಆಗ ವಿಧಾನಸಭೆ ಚುನಾವಣೆ ಸಿದ್ಧತೆಯಲ್ಲಿ ನಿರತವಾಗಿದ್ದಾಗ, ಒಮರ್‌ ಅಬ್ದುಲ್ಲಾ ಮಾತ್ರ, ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು.

ಜಮ್ಮು–ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರುಸ್ಥಾಪನೆಯಾಗುವವರೆಗೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದ ಅವರು, ತಮ್ಮ ನಿಲುವನ್ನು ಬದಲಾಯಿಸಿದರು. ಬಡ್ಗಾಮ್‌ ಮತ್ತು ಗಾಂದರಬಲ್‌ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಒಮರ್‌, ಎರಡು ಕ್ಷೇತ್ರಗಳಲ್ಲಿಯೂ ಗೆಲುವಿನ ನಗೆ ಬೀರಿದ್ದಾರೆ.

ತಂದೆ ಫಾರೂಕ್ ಅಬ್ದುಲ್ಲಾ ಈಗಾಗಲೇ ಚುನಾವಣಾ ರಾಜಕೀಯದಿಂದ ದೂರವೇ ಉಳಿದಿದ್ದಾರೆ. ಹೀಗಾಗಿ, ಈ ಬಾರಿಯ ವಿಧಾನಸಭೆ ಚುನಾವಣೆ ಒಮರ್‌ ಅಬ್ದುಲ್ಲಾ ಅವರ ರಾಜಕೀಯ ಭವಿಷ್ಯ ನಿರ್ಧರಿಸಲಿದೆ ಎಂದೇ ವಿಶ್ಲೇಷಿಸಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.