ನವೆದೆಹಲಿ: ಆರು ಅತ್ಯಾಧುನಿಕ ಜಲಂತರ್ಗಾಮಿಗಳನ್ನು ದೇಶಿಯವಾಗಿ ನಿರ್ಮಿಸುವ ಸಲುವಾಗಿ, ಭಾರತೀಯ ನೌಕಾಪಡೆಗೆ ₹43,000 ಕೋಟಿ ರೂಪಾಯಿ ಬಿಡುಗಡೆ ಮಾಡಲು ರಕ್ಷಣಾ ಇಲಾಖೆ ಒಪ್ಪಿಗೆ ನೀಡಿದೆ.
ಶುಕ್ರವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ನಡೆದ ರಕ್ಷಣಾ ಸ್ವಾದೀನ ಸಮಿತಿ (ಡಿಎಸಿ) ಸಭೆಈ ತೀರ್ಮಾನ ತೆಗೆದುಕೊಂಡಿದೆ. ಚೀನಾ ತನ್ನ ನೌಕಾ ಬಲವನ್ನು ಗಣನೀಯವಾಗಿ ಹೆಚ್ಚಿಸುತ್ತಿರುವ ಬೆನ್ನಲ್ಲೇ ಇಂತಹದೊಂದು ತೀರ್ಮಾನ ಭಾರತ ಸರ್ಕಾರದಿಂದ ಹೊರ ಬಿದ್ದಿದೆ.
ಇದೊಂದು ನೌಕಾಪಡೆಯ ಬೃಹತ್ ಯೋಜನೆಯಾಗಿದ್ದು, ಅತ್ಯಂತ ದಕ್ಷವಾದ ಜಲಂತಾರ್ಗಾಮಿಗಳನ್ನು ದೇಶಿಯವಾಗಿ ನಿರ್ಮಿಸುವುದಲ್ಲದೇ ನೌಕಾಪಡೆಯ ಸಲಕರಣೆಗಳಿಗೆ ವಿದೇಶಗಳ ಮೇಲೆ ಅವಲಂಬಿತವಾಗುವುದನ್ನು ಇದು ತಪ್ಪಿಸಲಿದೆ. ಈ ಯೋಜನೆಗೆ ಪಿ–75 ಎಂದು ಹೆಸರಿಡಲಾಗಿದೆ ಎಂದು ರಾಜನಾಥ್ ಸಿಂಗ್ ಕಚೇರಿ ತಿಳಿಸಿದೆ.
ಈ ನಿರ್ಧಾರಗಳು ರಕ್ಷಣಾ ಇಲಾಖೆಯ ಇತಿಹಾಸದಲ್ಲಿ ಮೈಲಿಗಲ್ಲಾಗಲಿದ್ದು, ಇದೊಂದು ಅತಿದೊಡ್ಡ ‘ಮೇಕ್ ಇನ್ ಇಂಡಿಯಾ‘ ಯೋಜನೆಯಾಗಿದೆ ಎಂದು ರಕ್ಷಣಾ ಇಲಾಖೆ ಕಚೇರಿ ತಿಳಿಸಿದೆ.
ಇದರೊಂದಿಗೆ ₹6,800 ಕೋಟಿ ಮೌಲ್ಯದ ಮಿಲಟರಿ ಶಸ್ತ್ರಾಸ್ತ್ರಗಳು ಹಾಗೂ ಸಲಕರಣೆಗಳಿಗೆ ಸಂಬಂಧಿಸಿದ ಬಂಡವಾಳ ಸ್ವಾದೀನ ಪ್ರಸ್ತಾವನೆಗೂ ಕೂಡ ರಕ್ಷಣಾ ಇಲಾಖೆ ಅನುಮೋದನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.