ADVERTISEMENT

ಬಿಇಎಲ್‌ ಜತೆ ರಕ್ಷಣಾ ಸಚಿವಾಲಯ ಒಪ್ಪಂದ

ಭಾರತೀಯ ಸೇನೆಗಾಗಿ ಎಲೆಕ್ಟ್ರಾನಿಕ್‌ ಫ್ಯೂಸ್‌ಗಳ ಖರೀದಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2023, 12:36 IST
Last Updated 15 ಡಿಸೆಂಬರ್ 2023, 12:36 IST
   

ನವದೆಹಲಿ: ಭಾರತೀಯ ಸೇನೆಗೆ ಎಲೆಕ್ಟ್ರಾನಿಕ್ ಫ್ಯೂಸ್‌ಗಳನ್ನು ಖರೀದಿಸುವುದಕ್ಕೆ ಸಂಬಂಧಿಸಿ ರಕ್ಷಣಾ ಸಚಿವಾಲಯವು ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್‌) ಜೊತೆ ಒಪ್ಪಂದಕ್ಕೆ ಶುಕ್ರವಾರ ಸಹಿ ಹಾಕಿದೆ.

₹5,300 ಕೋಟಿ ವೆಚ್ಚದಲ್ಲಿ ಈ ಸಾಧನಗಳನ್ನು ಖರೀದಿ ಮಾಡಲಾಗುತ್ತದೆ. ಮದ್ದುಗುಂಡುಗಳ ಆಮದು ತಗ್ಗಿಸುವುದು ಹಾಗೂ ಸೇನೆಯಲ್ಲಿನ ಒಟ್ಟಾರೆ ಶಸ್ತ್ರಾಸ್ತ್ರಗಳ ದಾಸ್ತಾನು ಹೆಚ್ಚಿಸುವುದು ಈ ಖರೀದಿಯ ಉದ್ದೇಶ ಎಂದು ಸಚಿವಾಲಯ ತಿಳಿಸಿದೆ.

‘ಬಿಇಎಲ್‌ನ ಪುಣೆ ಘಟಕದಿಂದ ಎಲೆಕ್ಟ್ರಾನಿಕ್ ಫ್ಯೂಸ್‌ಗಳನ್ನು ಖರೀದಿಸಲಾಗುತ್ತದೆ. ಮುಂದಿನ 10 ವರ್ಷಗಳ ಅವಧಿಗೆ ಬಿಇಎಲ್‌ ಇವುಗಳನ್ನು ಪೂರೈಸಲಿದೆ. ಈ ಸಂಬಂಧ ಐತಿಹಾಸಿಕ ಒಪ್ಪಂದಕ್ಕೆ ಡಿ.15ರಂದು ಸಹಿ ಹಾಕಲಾಗಿದೆ’ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ADVERTISEMENT

‘ಬಿಇಎಲ್‌ನ ಪುಣೆ ಮತ್ತು ನಾಗ್ಪುರ ಘಟಕಗಳಲ್ಲಿ ಈ ಫ್ಯೂಸ್‌ಗಳನ್ನು ಉತ್ಪಾದಿಸಲಾಗುತ್ತದೆ. ಆತ್ಮನಿರ್ಭರ ಭಾರತ ಭಾಗವಾಗಿ ಇವುಗಳನ್ನು ಉತ್ಪಾದಿಸಲಾಗುತ್ತಿದ್ದು, ಒಂದೂವರೆ ಲಕ್ಷ ಕೆಲಸದ ದಿನಗಳಷ್ಟು ಉದ್ಯೋಗ ಸೃಷ್ಟಿಯಾಗಲಿದೆ. ಈ ಉತ್ಪಾದನಾ ಕಾರ್ಯದಿಂದ ದೇಶದ ಹಲವು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೂ ಉತ್ತೇಜನ ಸಿಗಲಿದೆ’ ಎಂದು ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.