ADVERTISEMENT

₹ 1,752 ಕೋಟಿ ಒಪ್ಪಂದಕ್ಕೆ ರಕ್ಷಣಾ ಸಚಿವಾಲಯ ಸಹಿ

ನೌಕಾಪಡೆ ಮತ್ತು ಕರಾವಳಿ ಕಾವಲುಪಡೆಗೆ 463 ಸ್ವದೇಶಿ ಬಂದೂಕು ಪೂರೈಕೆ ಯೋಜನೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2024, 16:08 IST
Last Updated 14 ಫೆಬ್ರುವರಿ 2024, 16:08 IST
ನೌಕಾಪಡೆ
ನೌಕಾಪಡೆ   

ನವದೆಹಲಿ (ಪಿಟಿಐ): ಭಾರತೀಯ ನೌಕಾಪಡೆ ಮತ್ತು ಕರಾವಳಿ ಕಾವಲುಪಡೆಗೆ 463 ಸ್ವದೇಶಿ ನಿರ್ಮಿತ 12.7 ಎಂಎಂ ಸ್ಥಿರೀಕೃತ ರಿಮೋಟ್ ಕಂಟ್ರೋಲ್ ಬಂದೂಕುಗಳ ತಯಾರಿಕೆ ಮತ್ತು ಪೂರೈಕೆಗಾಗಿ ರಕ್ಷಣಾ ಸಚಿವಾಲಯವು ಕಾನ್ಪುರ ಮೂಲದ ಸಂಸ್ಥೆಯೊಂದಿಗೆ ₹ 1,752.13 ಕೋಟಿ ಒಪ್ಪಂದಕ್ಕೆ ಬುಧವಾರ ಸಹಿ ಹಾಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ಸಚಿವಾಲಯವು ಕಾನ್ಪುರದ ಅಡ್ವಾನ್ಸ್ಡ್ ವೆಪನ್ ಎಕ್ವಿಪ್‌ಮೆಂಟ್‌ ಇಂಡಿಯಾ ಲಿಮಿಟೆಡ್‌ನೊಂದಿಗೆ (ಎಡಬ್ಲ್ಯುಇಐಎಲ್‌) ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದವು ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಮತ್ತಷ್ಟು ಉತ್ತೇಜನ ನೀಡಲಿದೆ. ಐದು ವರ್ಷಗಳ ಅವಧಿಯಲ್ಲಿ 125ಕ್ಕೂ ಹೆಚ್ಚು ಭಾರತೀಯ ಮಾರಾಟಗಾರರು ಮತ್ತು ರಕ್ಷಣೆಯ ಸರ್ಕಾರಿ ಸ್ವಾಮ್ಯದ ಉದ್ಯಮಗಳಿಗೆ ರಕ್ಷಣಾ ಸಲಕರಣೆಗಳ ಉತ್ಪಾದನೆಯಲ್ಲಿ ದೊಡ್ಡ ಮಾರ್ಗವನ್ನು ತೆರೆಯಲಿದೆ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಈ ಬಂದೂಕುಗಳಿಂದ ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆಗೆ ಮತ್ತಷ್ಟು ಬಲ ಸಿಗಲಿದೆ. ಹಗಲು ಮತ್ತು ರಾತ್ರಿ ವೇಳೆ ಹಡಗುಗಳಿಗೆ ಸಮುದ್ರ ಮಾರ್ಗದಲ್ಲಿ ಕಡಲ್ಗಳ್ಳರಿಂದ ಎದುರಾಗಲಿರುವ ಅಪಾಯಗಳನ್ನು ನಿಖರವಾಗಿ ಹತ್ತಿಕ್ಕಲು ಸಾಧ್ಯವಾಗಲಿದೆ ಎಂದು ಸಚಿವಾಲಯ ಹೇಳಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.