ADVERTISEMENT

ನೂತನ ಅಪರಾಧ ಕಾನೂನುಗಳ ಅನುಷ್ಠಾನ ಮುಂದೂಡಿ: ಜೈರಾಮ್ ರಮೇಶ್ ಆಗ್ರಹ

ಪಿಟಿಐ
Published 22 ಜೂನ್ 2024, 9:39 IST
Last Updated 22 ಜೂನ್ 2024, 9:39 IST
ಜೈರಾಮ್ ರಮೇಶ್ 
ಜೈರಾಮ್ ರಮೇಶ್    

ನವದೆಹಲಿ: ಜುಲೈ 1ರಿಂದ ಜಾರಿಗೆ ಬರಲಿರುವ ಮೂರು ಹೊಸ ಅಪರಾಧ ಕಾನೂನುಗಳ ಅನುಷ್ಠಾನ ಮುಂದೂಡಬೇಕು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಒತ್ತಾಯಿಸಿದ್ದಾರೆ.

‌‌‌‌ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, '146 ಜನ ಸಂಸದರನ್ನು ಸಂಸತ್‌ನಿಂದ ಅಮಾನತು ಮಾಡಿದ್ದ ಸಂದರ್ಭದಲ್ಲಿ ಈ ಮೂರು ಮಸೂದೆಗಳನ್ನು ಅಂಗೀಕರಿಸಲಾಗಿದೆ’ ಎಂದು ಹೇಳಿದ್ದಾರೆ.

'2023ರ ಡಿಸೆಂಬರ್ 25ರಂದು, ರಾಷ್ಟ್ರಪತಿಯವರು, ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಸಂಹಿತೆ ಕಾಯಿದೆಗಳಿಗೆ ತಮ್ಮ ಒಪ್ಪಿಗೆ ನೀಡಿದ್ದರು. ಈ ಮೂರು ನಿರ್ಣಾಯಕ ಮಸೂದೆಗಳನ್ನು ಯಾವುದೇ ಚರ್ಚೆ ಇಲ್ಲದೆಯೇ, ಏಕಪಕ್ಷೀಯವಾಗಿ ಅಂಗೀಕರಿಸಲಾಗಿದೆ. ಲೋಕಸಭೆಯ 100ರಷ್ಟು ಸದಸ್ಯರು ಸೇರಿದಂತೆ ಎರಡೂ ಸದನಗಳ ಒಟ್ಟು 146 ಸಂಸದರನ್ನು ಸಂಸತ್‌ನಿಂದ ಹೊರಗೆ ಹಾಕಿ, ಈ ಮಸೂದೆಗಳನ್ನು ಅಂಗೀಕರಿಸಲಾಗಿದೆ' ಎಂದು ಅವರು ಹೇಳಿದ್ದಾರೆ.

ADVERTISEMENT

'ಜುಲೈ 1ರಂದು ಜಾರಿಗೆ ಬರಲಿರುವ ಈ ಮೂರು ಹೊಸ ಕಾನೂನುಗಳ ಅನುಷ್ಠಾನ ಮುಂದೂಡಬೇಕು ಎಂಬುದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಆಗ್ರಹ. ಈ ಕಾನೂನುಗಳನ್ನು ಪುನರ್‌ರಚಿಸಲಾದ ಗೃಹ ವ್ಯವಹಾರಗಳ ಸ್ಥಾಯಿ ಸಮಿತಿಯು ಈ ಬಗ್ಗೆ ಕೂಲಂಕಷವಾಗಿ ಮರು ಪರಿಶೀಲಿಸಬೇಕು. ಜೊತೆಗೆ ಕಾನೂನು ತಜ್ಞರೊಂದಿಗೆ ಸಮಿತಿಯು ಚರ್ಚೆ ನಡೆಸಬೇಕು. ಅದಾದ ಬಳಿಕ 18ನೇ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸದಸ್ಯರ ಅಭಿಪ್ರಾಯ ಆಲಿಸಬೇಕು' ಎಂದೂ ಜೈರಾಮ್ ರಮೇಶ್ ಆಗ್ರಹಿಸಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಕ್ರವಾರ ಪತ್ರ ಬರೆದು, ಅವಸರದಲ್ಲಿ ಅಂಗೀಕಾರ ನೀಡಿರುವ ಮೂರು ಹೊಸ ಅಪರಾಧ ಕಾನೂನುಗಳ ಅನುಷ್ಠಾನ ಮುಂದೂಡಬೇಕು ಎಂದು ಒತ್ತಾಯಿಸಿದ್ದರು.

‘ಅಪರಾಧ ಕಾನೂನುಗಳ ಅನುಷ್ಠಾನ ಮುಂದೂಡುವುದರಿಂದ, ಸಂಸತ್‌ನಲ್ಲಿ ಅವುಗಳ ಕುರಿತು ಮತ್ತೊಮ್ಮೆ ಪರಾಮರ್ಶೆ ನಡೆಸಲು ಅನುಕೂಲವಾಗಲಿದೆ’ ಎಂದು ಅವರು ಪತ್ರದಲ್ಲಿ ವಿವರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.