ನವದೆಹಲಿ: ಮುಂಬರುವ ದಿನಗಳಲ್ಲಿ ಜಾರಿ ನಿರ್ದೇಶನಾಲಯ(ಇಡಿ)ವು ಬಂಧಿಸಿದರೂ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಜೈಲಿನಿಂದಲೇ ದೆಹಲಿ ಸರ್ಕಾರವನ್ನು ನಡೆಸಲಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ (ಎಎಪಿ) ಹೇಳಿದೆ.
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ನಡೆದ ಆರೋಪದಡಿ ವಿಚಾರಣೆಗೆ ಹಾಜರಾಗುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಎಎಪಿ, ಕೇಜ್ರಿವಾಲ್ ಅವರನ್ನು ಜೈಲಿಗೆ ಕಳುಹಿಸಲು ಮೋದಿ ಸರ್ಕಾರ ಹೂಡಿರುವ ಷಡ್ಯಂತ್ರ ಎಂದು ಆರೋಪಿಸಿದೆ.
ಪಕ್ಷದ ಶಾಸಕರು ಮುಖ್ಯಮಂತ್ರಿಯೊಂದಿಗೆ ಸಭೆ ನಡೆಸಿ ಚರ್ಚಿಸಿದ್ದಾರೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದಂತೆ ಒತ್ತಾಯಿಸಲಾಗಿದೆ ಎಂದು ಸಚಿವೆ ಅತೀಶಿ ಸುದ್ದಿಗಾರರಿಗೆ ಹೇಳಿದ್ದಾರೆ.
‘ಜನರು ಕೇಜ್ರಿವಾಲ್ ಅವರನ್ನು ಅಧಿಕಾರಕ್ಕೆ ತರಲು ಮತ ಹಾಕಿ ಆಯ್ಕೆ ಮಾಡಿದ್ದಾರೆ. ಅವರು ಜೈಲಿಗೆ ಹೋದರೂ, ಮುಖ್ಯಮಂತ್ರಿಯಾಗಿ ಅಲ್ಲಿಂದಲೇ ದೆಹಲಿ ಸರ್ಕಾರವನ್ನು ನಡೆಸಲಿದ್ದಾರೆ. ಸಚಿವ ಸಂಪುಟ ಸಭೆಯನ್ನು ಜೈಲಿನಲ್ಲೇ ನಡೆಸಲು ಅನುಮತಿ ನೀಡಬೇಕು ಎಂದು ಕೋರಿ ನ್ಯಾಯಾಲಯದ ಮೊರೆ ಹೋಗಲಾಗುವುದು. ದೆಹಲಿ ಸರ್ಕಾರ ಜೈಲಿನಿಂದಲೇ ನಡೆಯಲಿದೆ’ ಎಂದು ಅತೀಶಿ ಹೇಳಿದ್ದಾರೆ.
ಪಕ್ಷದ ಸದಸ್ಯರೊಂದಿಗೆ ಶೀಘ್ರದಲ್ಲಿ ಕೇಜ್ರಿವಾಲ್ ಅವರು ಸಭೆ ನಡೆಸಲಿದ್ದಾರೆ ಎಂದು ಸಚಿವರಾದ ಸೌರಭ್ ಭಾರದ್ವಾಜ್ ಹಾಗೂ ಅತೀಶಿ ತಿಳಿಸಿದ್ದಾರೆ.
ನ. 2ರಂದು ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯವು ಕೇಜ್ರಿವಾಲ್‌ಗೆ ಸೂಚಿಸಿತ್ತು. ಆದರೆ ಅಂದು ಮಧ್ಯಪ್ರದೇಶದಲ್ಲಿ ಆಯೋಜನೆಗೊಂಡಿದ್ದ ಚುನಾವಣಾ ರ‍್ಯಾಲಿಯಲ್ಲಿ ಅವರು ಪಾಲ್ಗೊಳ್ಳುವುದಾಗಿ ಹೇಳಿದ್ದರು. ತಮಗೆ ನೋಟಿಸ್ ನೀಡಿರುವುದು ಕಾನೂನುಬಾಹಿರ ಹಾಗೂ ರಾಜಕೀಯ ಪ್ರೇರಿತ. ಬಿಜೆಪಿ ಕೋರಿಕೆಯಂತೆ ತನಗೆ ಸಮನ್ಸ್ ಕಳುಹಿಸಲಾಗಿದೆ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.