ನವದೆಹಲಿ: ಹೃದಯಾಘಾತ ಮತ್ತು ಪಾರ್ಶ್ವವಾಯು ಸಂಭವಿಸಿದಾಗ ಸೂಕ್ತ ಚಿಕಿತ್ಸೆಯ ಹುಡುಕಾಟದಲ್ಲಿ ಆಗುವ ವಿಳಂಬವೇ ಹೆಚ್ಚಿನ ಜನರು ಮೃತಪಡಲು ಕಾರಣ ಎಂದು ಲ್ಯಾನ್ಸೆಟ್ ನಿಯಕಾಲಿಕವು ಪ್ರಕಟಿಸಿರುವ ಸಂಶೋಧನೆಯೊಂದು ತಿಳಿಸಿದೆ.
ಇಲ್ಲಿನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ಈ ಸಂಶೋಧನೆ ನಡೆಸಲಾಗಿದೆ. ಹೃದಯಾಘಾತ ಅಥವಾ ಪಾರ್ಶ್ವವಾಯುಗೆ ಒಳಗಾದ ರೋಗಿಗಳ ಪೈಕಿ ಅತಿ ಕಡಿಮೆ ಜನರು ಮಾತ್ರ ತುರ್ತಾಗಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಇಂಥ ಸಂದರ್ಭದಲ್ಲಿ ವಿವಿಧ ಹಂತಗಳಲ್ಲಿ ವಿಳಂಬವಾಗುವುದು ಮತ್ತು ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ದೊರೆಯದಿರುವುದು ಸಾವಿಗೆ ಕಾರಣವಾಗುತ್ತದೆ ಎಂದು ಅದು ತಿಳಿಸಿದೆ.
ಯಾವ ಆಸ್ಪತ್ರೆಗೆ ತೆರಳುವುದು ಎಂಬ ನಿರ್ಧಾರ ತೆಗೆದುಕೊಳ್ಳುವಾಗ, ಸೂಕ್ತ ಆಸ್ಪತ್ರೆಗೆ ತಲುಪುವಾಗ ಮತ್ತು ಚಿಕಿತ್ಸೆ ನೀಡುವಾಗ –ಈ ಮೂರು ಹಂತಗಳಲ್ಲಿಯೂ ವಿಳಂಬವಾಗುತ್ತಿದೆ. ಶೇ 10.8ರಷ್ಟು ರೋಗಿಗಳು ಮಾತ್ರ ಹೃದಯಾಘಾತ ಸಂಭವಿಸಿದ ಗಂಟೆಯ ಒಳಗಾಗಿ ಸೂಕ್ತ ಆಸ್ಪತ್ರೆ ತಲುಪುತ್ತಾರೆ. ಕಾಯಿಲೆಯ ಲಕ್ಷಣ ಮತ್ತು ಗಂಭೀರತೆಯನ್ನು ಗುರುತಿಸುವಲ್ಲಿ ವಿಫಲವಾಗುವುದೂ, ಆಸ್ಪತ್ರೆಗೆ ತೆರಳಲು ವಿಳಂಬವಾಗುವುದಕ್ಕೆ ಪ್ರಮುಖ ಕಾರಣ ಎಂದು ತಿಳಿಸಿದೆ.
ಥ್ರಂಬೋಲಿಸಿಸ್‌ನಂಥ (ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ) ಚಿಕಿತ್ಸೆ ನೀಡಲು ವಿಫಲವಾಗುವುದೂ ರೋಗಿಗಳ ಸಾವಿಗೆ ಕಾರಣ. ಚಿಕಿತ್ಸೆ ವಿಳಂಬ ತಗ್ಗಿದರೆ ಮರಣದರವು ಶೇ 30ರಷ್ಟು ಇಳಿಕೆಯಾಗಲಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.