ADVERTISEMENT

ಪ್ರಾ.ಶಾಲಾ ಶಿಕ್ಷಕರ ನೇಮಕಕ್ಕೆ ನಿಯೋಸ್‌ನ ಡಿಪ್ಲೊಮಾ ಅರ್ಹತೆ ಅಲ್ಲ: ಎನ್‌ಸಿಟಿಇ

18 ತಿಂಗಳ ಡಿಎಲ್‌ಎಡ್‌ಗೆ ಮಾನ್ಯತೆ ಇಲ್ಲ

ಪ್ರಕಾಶ್ ಕುಮಾರ್
Published 4 ನವೆಂಬರ್ 2019, 20:00 IST
Last Updated 4 ನವೆಂಬರ್ 2019, 20:00 IST
   

ನವದೆಹಲಿ: ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಓಪನ್ ಸ್ಕೂಲಿಂಗ್‌ (ನಿಯೋಸ್‌) ಮೂಲಕಶಿಕ್ಷಕರು ಇತ್ತೀಚೆಗೆ ಪಡೆದುಕೊಂಡ 18 ತಿಂಗಳ ಡಿಪ್ಲೊಮಾಕ್ಕೆ ಮಾನ್ಯತೆ ನೀಡಲು ರಾಷ್ಟ್ರೀಯ ಶಿಕ್ಷಕ ಶಿಕ್ಷಣ ಪರಿಷತ್ತು (ಎನ್‌ಸಿಟಿಇ) ನಿರಾಕರಿಸಿದೆ. ಇದರಿಂದಾಗಿ ಸುಮಾರು 12 ಲಕ್ಷ ಶಿಕ್ಷಕರ ಭವಿಷ್ಯ ಅತಂತ್ರವಾಗಿದೆ.

ಪ್ರಾಥಮಿಕ ಶಾಲೆಯ ಶಿಕ್ಷಕರಾಗಲು ಡಿಪ್ಲೊಮಾ ಕನಿಷ್ಠ ವಿದ್ಯಾರ್ಹತೆ ಎಂದು ನಿಗದಿ ಮಾಡಲಾಗಿತ್ತು. ಡಿಪ್ಲೊಮಾ ಇಲ್ಲದ ಶಿಕ್ಷಕರಿಗೆ ನೆರವು ನೀಡುವುದಕ್ಕಾಗಿ 2017ರಲ್ಲಿ ನಿಯೋಸ್‌ ಮೂಲಕ ಈ ಡಿಪ್ಲೊಮಾ ಕೋರ್ಸ್‌ ರೂಪಿಸಲಾಗಿತ್ತು. ಡಿಎಲ್‌ಎಡ್‌ (ಡಿಪ್ಲೊಮಾ ಇನ್‌ ಎಲಿಮೆಂಟರಿ ಎಜುಕೇಷನ್‌) ಎಂಬ 18 ತಿಂಗಳ ಕೋರ್ಸ್‌ ಮಾಡಿದವರಿಗೆ ಡಿಪ್ಲೊಮಾ ನೀಡಲಾಗುವುದು ಎಂದು ಆಗಿನ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್‌ ಭರವಸೆ ನೀಡಿದ್ದರು.

ಮಾನವ ಸಂಪನ್ಮೂಲ ಸಚಿವಾಲಯದ ಸೂಚನೆಯಂತೆ, ನಿಯೋಸ್‌ನ ಈ ಕೋರ್ಸ್‌ಗೆ ಎನ್‌ಸಿಟಿಇ ಕೂಡ ಅನುಮೋದನೆ ನೀಡಿತ್ತು. 2017ರ ಸೆ. 22ರಂದು ಈ ಬಗ್ಗೆ ಅಧಿಸೂಚನೆಯನ್ನೂ ಹೊರಡಿಸಲಾಗಿತ್ತು.

ADVERTISEMENT

ಈ ಡಿಪ್ಲೊಮಾದ ಮೊದಲ ತಂಡದ ಅಭ್ಯರ್ಥಿಗಳು ಕೋರ್ಸ್‌ ಪೂರ್ಣಗೊಳಿಸಿ ಐದು ತಿಂಗಳ ಬಳಿಕ ಎನ್‌ಸಿಟಿಇ ಸ್ಪಷ್ಟೀಕರಣ ನೀಡಿದೆ. ಪ್ರಾಥಮಿಕ ಶಾಲೆಯಲ್ಲಿ ಹೊಸ ಶಿಕ್ಷಕರ ನೇಮಕಾತಿಗೆ ನಿಯೋಸ್‌ನ ಡಿಪ್ಲೊಮಾ ಮೌಲಿಕ ಅಲ್ಲ ಎಂದು ಹೇಳಿದೆ.

ಬಿಹಾರ ಸರ್ಕಾರವು ಪ್ರಾಥಮಿಕ ಶಾಲೆಯ ಶಿಕ್ಷಕ ನೇಮಕಾತಿ ಪ್ರಕ್ರಿಯೆ ಆರಂಭಿಸಿತ್ತು. ಈ ಹುದ್ದೆಗೆ ನಿಯೋಸ್‌ನ ಡಿಎಲ್‌ಎಡ್‌ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಡಿಪ್ಲೊಮಾವನ್ನು ಅರ್ಹತೆಯಾಗಿ ಪರಿಗಣಿಸಬಹುದೇ ಎಂದು ಬಿಹಾರ ಸರ್ಕಾರವು ಎನ್‌ಸಿಟಿಇಯ ಸಲಹೆ ಕೇಳಿತ್ತು. ಈ ಡಿಪ್ಲೊಮಾ ಮಾಡಿದವರನ್ನು ಶಿಕ್ಷಕರಾಗಿ ನೇಮಿಸಲು ಸಾಧ್ಯವಿಲ್ಲ ಎಂದು ಎನ್‌ಸಿಟಿಇ ಹೇಳಿದೆ.

ಶಿಕ್ಷಕರಾಗುವ ಆಸೆಯಿಂದ ಈ ಕೋರ್ಸ್‌ ಪೂರ್ಣಗೊಳಿಸಿದ ಲಕ್ಷಾಂತರ ಜನರ ಭವಿಷ್ಯದ ಬಗ್ಗೆ ಎನ್‌ಸಿಟಿಇ ಏನನ್ನೂ ಹೇಳಿಲ್ಲ. ಮಾನವ ಸಂಪನ್ಮೂಲ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಅವರಿಗೆ ಅಧಿಕಾರಿಗಳು ಈ ವಿಚಾರವನ್ನು ಕಳೆದ ತಿಂಗಳು ತಿಳಿಸಿದ್ದಾರೆ. ಹಾಗಿದ್ದರೂ ಸಚಿವಾಲಯವು ಈ ಬಗ್ಗೆ ಸ್ಪಷ್ಟವಾದ ನಿಲುವು ತಳೆದಿಲ್ಲ.

ಬದಲಾದ ನಿಲುವು
2017ರ ಆಗಸ್ಟ್‌ 10ರ ಮೊದಲು ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ನೇಮಕವಾಗಿದ್ದ ತರಬೇತಿರಹಿತ ಶಿಕ್ಷಕರಿಗೆ ಮಾತ್ರ ನಿಯೋಸ್‌ನ ಡಿಎಲ್‌ಎಡ್‌ ಕೋರ್ಸ್‌ ಅನ್ವಯವಾಗುತ್ತದೆ. ಈ ಕೋರ್ಸ್‌ನ ಅವಧಿ 18 ತಿಂಗಳು ಮಾತ್ರ. ಎರಡು ವರ್ಷದ ಡಿಎಲ್‌ಎಡ್‌ ಕೋರ್ಸ್‌ ಮಾಡಿದವರನ್ನು ಮಾತ್ರ ಹೊಸ ನೇಮಕಾತಿಯಲ್ಲಿ ಪರಿಗಣಿಸಬೇಕು ಎಂದು ಎನ್‌ಸಿಟಿಇ ಹೇಳಿದೆ.

2017ರಲ್ಲಿ ನಿಯೋಸ್‌ನ ಡಿಪ್ಲೊಮಾಕ್ಕೆ ಮಾನ್ಯತೆ ನೀಡುವಾಗ ಎನ್‌ಸಿಟಿಇ ಹೇಳಿದ್ದೇ ಬೇರೆ. ಡಿಪ್ಲೊಮಾ ನಿಯಮವನ್ನು ಬದಲಾಯಿಸಲಾಗಿದೆ. ಆರು ತಿಂಗಳ ಇಂಟರ್ನ್‌ಶಿಪ್‌ ಜತೆಗಿನ ಎರಡು ವರ್ಷದ ಕೋರ್ಸ್‌ನ ಅವಧಿಯನ್ನು 18 ತಿಂಗಳಿಗೆ ಇಳಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿತ್ತು.

ಬಿಹಾರ: 2.5 ಲಕ್ಷ ಮಂದಿಗೆ ನಷ್ಟ?
ಬಿಹಾರದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಿಂದ 2.5 ಲಕ್ಷ ಅಭ್ಯರ್ಥಿಗಳನ್ನು ಹೊರಗಿರಿಸಲಾಗಿದೆ. ಎನ್‌ಸಿಟಿಇ ಸ್ಪಷ್ಟನೆಯೇ ಇದಕ್ಕೆ ಕಾರಣ. ಡಿಪ್ಲೊಮಾ ಮಾಡಿರುವ ಹಲವರು ಈಗ, ಎನ್‌ಸಿಟಿಇ ನೀತಿಯ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದಾರೆ.

‘ಕೇಂದ್ರ ಸರ್ಕಾರವು ನಮಗೆ ಮೋಸ ಮಾಡಿದೆ. ಈ ಡಿಪ್ಲೊಮಾ ಮೌಲಿಕ ಅಲ್ಲ ಎಂಬುದನ್ನು ನಮಗೆ ಮೊದಲೇ ಹೇಳಬೇಕಿತ್ತು. ಖಾಸಗಿ ಸಂಸ್ಥೆಗಳ ಒತ್ತಡದಿಂದಾಗಿ ಎನ್‌ಸಿಟಿಇ ಈ ನಿರ್ಧಾರ ಕೈಗೊಂಡಿದೆ’ ಎಂದು ಶಿಕ್ಷಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

**

ಈ ವಿಚಾರದಲ್ಲಿ ನಮ್ಮನ್ನು ಎನ್‌ಸಿಟಿಇ ಸಂಪರ್ಕಿಸಿಲ್ಲ. 2017ರಲ್ಲಿ ನಾವು ಈ ಕೋರ್ಸ್‌ ಆರಂಭಿಸಿದಾಗ ಇತರ ಡಿ‍ಪ್ಲೊಮಾ (ಡಿಎಲ್‌ಎಡ್‌) ಕೋರ್ಸ್‌ಗಳಿಗೆ ಇದು ಸಮಾನ ಅಲ್ಲ ಎಂದೂ ಹೇಳಿರಲಿಲ್ಲ
–ಸಿ.ಬಿ. ಶರ್ಮಾ, ನಿಯೋಸ್‌ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.