ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಮತದಾನವನ್ನು ವೀಕ್ಷಿಸಲು ಅಮೆರಿಕ, ನಾರ್ವೆ ಮತ್ತು ಸಿಂಗಪುರ ಸೇರಿದಂತೆ 16 ರಾಷ್ಟ್ರಗಳ ರಾಜತಾಂತ್ರಿಕರ ನಿಯೋಗ ಇಂದು (ಬುಧವಾರ) ಭೇಟಿ ನೀಡಿದೆ.
ಕಣಿವೆ ರಾಜ್ಯಕ್ಕೆ ಆಗಮಿಸಿದ ಈ ನಿಯೋಗವು ಬುಡ್ಗಾಂ ಜಿಲ್ಲೆಯ ಓಂಪೋರಾ ಪ್ರದೇಶದ ಮತಗಟ್ಟೆಗೆ ಭೇಟಿ ಕೊಟ್ಟಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತದಾನ ಕೇಂದ್ರಕ್ಕೆ ಭೇಟಿ ನೀಡಿದ ರಾಜತಾಂತ್ರಿಕರ ನಿಯೋಗಕ್ಕೆ ಮತದಾನ ಪ್ರಕ್ರಿಯೆಯ ಕುರಿತು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಬುಡ್ಗಾಂನ ಡೆಪ್ಯೂಟಿ ಕಮಿಷನರ್ ಅಕ್ಷಯ್ ಲ್ಯಾಬ್ರೂ ಮಾಹಿತಿ ನೀಡಿದರು.
ಜಮ್ಮುವಿಗೆ ಅಮೆರಿಕ, ಮೆಕ್ಸಿಕೊ, ಗಯಾನ, ದಕ್ಷಿಣ ಕೊರಿಯಾ, ಸೊಮಾಲಿಯಾ, ಪನಾಮ, ಸಿಂಗಪುರ, ನೈಜೀರಿಯಾ, ಸ್ಪೇನ್, ದಕ್ಷಿಣ ಆಫ್ರಿಕಾ, ನಾರ್ವೆ, ತಾಂಜಾನಿಯಾ, ರುವಾಂಡಾ, ಅಲ್ಜೀರಿಯಾ ದೇಶಗಳ ರಾಜತಾಂತ್ರಿಕರು ಭೇಟಿ ಕೊಟ್ಟಿದ್ದಾರೆ.
ಲೋಕಸಭೆ ಚುನಾವಣೆಯ ನಂತರ ಶಾಂತಿಯುತ ಮತ್ತು ಉತ್ತಮ ಮತದಾನ ನಡೆಯುವ ಪ್ರಕ್ರಿಯೆಯನ್ನು ತೋರಿಸುವ ಉದ್ದೇಶದೊಂದಿಗೆ ವಿದೇಶಿ ಪ್ರತಿನಿಧಿಗಳಿಗೆ ಕೇಂದ್ರ ಸರ್ಕಾರವು ಆಹ್ವಾನ ನೀಡಿತ್ತು ಎಂದು ತಿಳಿದು ಬಂದಿದೆ.
ಆದರೆ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿರುವ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಉಪಾಧ್ಯಕ್ಷ ಒಮರ್ ಅಬ್ದುಲ್ಲಾ, 'ಚುನಾವಣೆ ದೇಶದ ಆಂತರಿಕ ವಿಷಯವಾಗಿದೆ. ವಿದೇಶಿಗರ ಮಾನ್ಯತೆ ನಮಗೆ ಏಕೆ ಬೇಕು' ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.