ನವದೆಹಲಿ: ದೆಹಲಿಯ ಲೆಫ್ಟಿನಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರು 1984ರ ಸಿಖ್ ವಿರೋಧಿ ದಂಗೆಯಲ್ಲಿ ಬದುಕುಳಿದ 47 ಮಂದಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ಗುರುವಾರ ವಿತರಿಸಿದರು.
ಸೇವೆಯ ವಯೋಮಿತಿ ಮೀರಿದವರ ಅವಲಂಬಿತರಿಗೆ ಆರು ಹೆಚ್ಚುವರಿ ಪತ್ರಗಳನ್ನು ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಪಶ್ಚಿಮ ದೆಹಲಿಯ ತಿಲಕ್ ವಿಹಾರ ಪ್ರದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸೆಕ್ಸೇನಾ ಅವರು, ಉದ್ಯೋಗಕ್ಕೆ ಬಂದ 437 ಬಾಕಿ ಅರ್ಜಿಗಳು ಪರಿಶೀಲನಾ ಹಂತದಲ್ಲಿವೆ ಎಂದು ಹೇಳಿದರು.
ಈ ಪ್ರದೇಶದಲ್ಲಿ ಹೆಚ್ಚಾಗಿ 1984ರ ದಂಗೆಯ ಸಂತ್ರಸ್ತರ ಮನೆಗಳಿವೆ. ಈ ಸಂತ್ರಸ್ತರಿಗೆ ಪರಿಹಾರ ವಿತರಣೆಯನ್ನು ತ್ವರಿತವಾಗಿ ಕೈಗೊಳ್ಳಲು ವಿಶೇಷ ಶಿಬಿರಗಳನ್ನು ಆಯೋಜಿಸುವಂತೆ ಕಂದಾಯ ಇಲಾಖೆಗೆ ಸಕ್ಸೇನಾ ಸೂಚಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
‘ವಿಧವೆಯರ ಕಾಲೊನಿ’ ಎಂದು ಕರೆಯಲಾಗುವ ಈ ಪ್ರದೇಶಕ್ಕೆ ಇಲ್ಲಿನ ನಿವಾಸಿಗಳ ಆಶಯದಂತೆ ಬೇರೆ ಹೆಸರು ನಾಮಕರಣ ಮಾಡಲಾಗುವುದು ಎಂದು ಸಕ್ಸೇನಾ ಘೋಷಿಸಿದ್ದಾರೆ.
ಸಂತ್ರಸ್ತರ ಸಂಬಂಧಿಕರಿಗೆ ನೇಮಕಾತಿ ಅರ್ಹತೆಯಲ್ಲಿ ವಿನಾಯಿತಿ ನೀಡಬೇಕೆಂಬ ಪ್ರಸ್ತಾವವನ್ನೂ ಸಕ್ಸೇನಾ ಅನುಮೋದಿಸಿದರು.
ವಯೋಮಿತಿ ಮೀರಿದ ಅಥವಾ ಮೃತಪಟ್ಟ ಎಲ್ಲಾ ಅರ್ಹ ಅರ್ಜಿದಾರರನ್ನೂ ಪರಿಹಾರಕ್ಕೆ ಪರಿಗಣಿಸುವಂತೆ ದೆಹಲಿ ಸಿಖ್ ಗುರುದ್ವಾರ ಆಡಳಿತ ಮಂಡಳಿ ಕಳೆದ ವಾರ ಆಗ್ರಹಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.