ADVERTISEMENT

ಮಾಂಸ ಮಾರಾಟಗಾರರಿಗೆ ಥಳಿತ: 3 ಪೊಲೀಸರು ಸೇರಿ 7 ಮಂದಿ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 11:01 IST
Last Updated 17 ಮಾರ್ಚ್ 2023, 11:01 IST

ನವದೆಹಲಿ: ಇಬ್ಬರು ಮಾಂಸ ಮಾರಾಟಗಾರರನ್ನು ಮೂವರು ದೆಹಲಿ ಪೊಲೀಸ್‌ ಸಿಬ್ಬಂದಿ ಸೇರಿ ಏಳು ಮಂದಿ ಥಳಿಸಿದ್ದಾರೆ ಎನ್ನಲಾದ ಘಟನೆಯು ಪೂರ್ವ ದೆಹಲಿಯ ಶಹ್ದಾರಾದಲ್ಲಿ ನಡೆದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಚ್‌ 7ರಂದು ಈ ಘಟನೆ ನಡೆದಿದೆ. ನವಾಬ್‌ ಮತ್ತು ಶೋಯಿಬ್‌ ಎಂಬ ಮಾರಾಟಗಾರರಿದ್ದ ಕಾರು ಆನಂದ ವಿಹಾರ ಪ್ರದೇಶದಲ್ಲಿ ಬೈಕ್‌ ಒಂದಕ್ಕೆ ಗುದ್ದಿದ್ದ ಬಳಿಕ ಅವರ ಮೇಲೆ ದೌರ್ಜನ್ಯ ನಡೆಸಲಾಗಿದೆ ಎನ್ನಲಾಗಿದೆ.

ಆರೋಪಿಗಳನ್ನು ಗೋ–ರಕ್ಷಕರು ಎನ್ನಲಾಗಿದೆ. ಮಾರಾಟಗಾರರನ್ನು ಥಳಿಸಿದ ಬಳಿಕ ಅವರ ಮೇಲೆ ಆರೋಪಿಗಳು ಮೂತ್ರ ವಿಸರ್ಜನೆ ಮಾಡಿದ್ದಾರೆ. ಜೊತೆಗೆ, ಅವರನ್ನು ಕೊಲ್ಲುವ ಬೆದರಿಕೆ ಒಡ್ಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಘಟನೆ ನಡೆದ ಕೂಡಲೇ ಸಂತ್ರಸ್ತರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ನಾಲ್ಕು ದಿನಗಳ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಏಳು ಆರೋಪಿಗಳ ಮೇಲೂ ಎಫ್‌ಐಆರ್‌ ದಾಖಲಿಸಲಾಗಿದೆ. ಎಎಸ್‌ಪಿ ಸೇರಿ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ಕಾರು ಬೈಕಿಗೆ ಗುದ್ದಿದ್ದಕ್ಕೆ ಬೈಕ್‌ ಸವಾರ ₹ 4000 ಪರಿಹಾರ ನೀಡುವಂತೆ ಆಗ್ರಹಿಸಿದ. ಅದೇ ವೇಳೆ ಅಲ್ಲಿಗೆ ಬಂದ ಪೊಲೀಸ್‌ ವಾಹನದಲ್ಲಿದ್ದ ಮೂವರು ಪೊಲೀಸರು ಮಾಂಸ ಮಾರಾಟಗಾರರಿಂದ ₹2.500 ಪಡೆದು ಬೈಕ್‌ ಚಾಲಕನಿಗೆ ನೀಡಿದರು. ಬಳಿಕ ಗೋ–ರಕ್ಷಕರು ಎನ್ನಲಾದ ನಾಲ್ವರು ಇತರರನ್ನು ಸ್ಥಳಕ್ಕೆ ಕರೆದು ₹ 15,000 ನೀಡುವಂತೆ ಬೆದರಿಕೆ ಹಾಕಿದರು. ನಂತರ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅವರನ್ನು ಥಳಿಸಿ ಅವರ ಮೂತ್ರ ವಿಸರ್ಜನೆ ಮಾಡಿದರು ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಆರೋಪಿಗಳು ಸಂತ್ರಸ್ತರಿಂದ ₹25,000 ಕಸಿದುಕೊಂಡಿದ್ದಾರೆ ಎಂದು ಕೂಡಾ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.