ನವದೆಹಲಿ: ಹೊಸ ವರ್ಷದಂದು ನಗರದ ಹೊರಭಾಗದ ಸುಲ್ತಾನ್‌ಪುರಿಯಲ್ಲಿ ನಡೆದ ಯುವತಿ ಅಪಘಾತ ಪ್ರಕರಣ ದಿನದಿಂದ ದಿನಕ್ಕೆ ಹೊಸ ರೂಪ ಪಡೆಯುತ್ತಿದೆ. ಯುವತಿ ಸ್ನೇಹಿತೆ ಮದ್ಯ ಸೇವಿಸಿದ್ದಳು ಎಂಬ ಸುದ್ದಿ ಹರಡಿರುವ ಬೆನ್ನಲ್ಲೇ, ಚಾಲನೆ ವೇಳೆ ಮೃತ ಯುವತಿ ಮದ್ಯ ಸೇವಿಸಿದ ಯಾವುದೇ ಕುರುಹು ಶವ ಪರೀಕ್ಷೆ ವೇಳೆ ಪತ್ತೆಯಾಗಿಲ್ಲ ಎಂದು ಆಕೆಯ ಕುಟುಂಬಸ್ಥರು ಹೇಳಿದ್ದಾರೆ.
ಸ್ಕೂಟಿಗೆ ಕಾರು ಡಿಕ್ಕಿ ಹೊಡೆದಿದ್ದರಿಂದ 20 ವರ್ಷದ ಯುವತಿಯೊಬ್ಬರು ಮೃತಪಟ್ಟಿದ್ದು, ಕಾರಿನಡಿ ಸಿಲುಕಿದ್ದ ಆಕೆಯ ಮೃತದೇಹವನ್ನು ಸುಮಾರು 12 ಕಿ.ಮೀ.ವರೆಗೂ ಎಳೆದೊಯ್ದಿರುವ ಘಟನೆ ದೆಹಲಿಯ ಹೊರಭಾಗದ ಸುಲ್ತಾನ್‌ಪುರಿಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿತ್ತು. ಮಾರುತಿ ಬಲೆನೊ ಕಾರಿನಲ್ಲಿದ್ದ ಐವರನ್ನು ಬಂಧಿಸಿದ ದೆಹಲಿ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆದಿದ್ದರು.
ಯುವತಿ ಶವಪರೀಕ್ಷೆಯ ವರದಿಯೊಂದಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಆಕೆಯ ಕುಟುಂಬದ ಸದಸ್ಯ ಭೂಪೇಂದ್ರ ಸಿಂಗ್ ಚೌರಾಸಿಯಾ, ಮರಣೋತ್ತರ ಪರೀಕ್ಷಾ ವರದಿಯಲ್ಲಿ ಮದ್ಯಪಾನ ಮಾಡಿದ ಯಾವುದೇ ಉಲ್ಲೇಖಗಳಿಲ್ಲ. ಇದು ಪೂರ್ವ ಯೋಜಿತ ಕೊಲೆ ಎಂದು ಆರೋಪಿಸಿದರು.
ಜನವರಿ 1 ರ ರಾತ್ರಿ ಮೃತ ಯುವತಿ ಮತ್ತು ಆಕೆಯ ಸ್ನೇಹಿತೆ ಮದ್ಯಪಾನ ಮಾಡಿದ್ದರು. ಆಕೆಗೆ ಪ್ರಜ್ಞೆ ಇರಲಿಲ್ಲ. ಸ್ಕೂಟಿ ಓಡಿಸುವವರು ಯಾರು ಎಂಬ ಕುರಿತು ನಾವು ಜಗಳವಾಡಿದ್ದೆವು ಎಂದು ಆಕೆಯ ಯುವತಿ ಪೊಲೀಸರ ವಿಚಾರಣೆ ವೇಳೆ ಹೇಳಿದ್ದಳು. ಅದರ ಬೆನ್ನಲ್ಲೇ ಕುಟುಂಬದವರ ಪ್ರತಿಕ್ರಿಯೆ ಹೊರಬಿದ್ದಿದೆ.
ಮಹಿಳೆಯ ‘ಖಾಸಗಿ ಭಾಗಗಳಿಗೆ ಯಾವುದೇ ಗಾಯಗಳಿಲ್ಲ’ ಎಂದು ಶವ ಪರೀಕ್ಷಾ ವರದಿ ಹೇಳಿದ್ದು, ಲೈಂಗಿಕ ದೌರ್ಜನ್ಯವನ್ನು ತಳ್ಳಿಹಾಕಬಹುದು ಎಂದು ಪೊಲೀಸರು ಹೇಳಿದ್ದರು. ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನ ವೈದ್ಯರ ಮಂಡಳಿಯು ಶವ ಪರೀಕ್ಷೆ ನಡೆಸಿತ್ತು.
ಶವಪರೀಕ್ಷೆ ವರದಿಯಲ್ಲಿ ಯಾವುದೇ ಅಸಹಜತೆ ಪತ್ತೆಯಾಗಿಲ್ಲ ಮತ್ತು ಯಾವುದೇ ಮದ್ಯದ ಅಂಶ ಹೊಟ್ಟೆಯಲ್ಲಿ ಕಂಡುಬಂದಿಲ್ಲ ಎಂಬುದನ್ನು ವರದಿ ಸ್ಪಷ್ಟಪಡಿಸಿದೆ ಎಂದು ಚೌರಾಸಿಯಾ ತಿಳಿಸಿದರು. ಇಬ್ಬರು ಸ್ನೇಹಿತರು ಒಟ್ಟಿಗೆ ಇದ್ದಾಗ, ಒಬ್ಬರು ಯಾವುದೇ ಗಾಯಗಳಿಲ್ಲದೆ ಪಾರಾಗಲು ಹೇಗೆ ಸಾಧ್ಯ? ಈ ಬಗ್ಗೆ ತನಿಖೆ ನಡೆಯಲಿ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.