ನವದೆಹಲಿ: ದೆಹಲಿಯಲ್ಲಿ ಗಾಳಿಯ ಗುಣಮಟ್ಟವು ಮತ್ತಷ್ಟು ಹದಗೆಟ್ಟಿದ್ದು 'ತೀವ್ರ ಕಳಪೆ' ಹಂತದಲ್ಲಿದೆ. ಇದು, ರಾಷ್ಟ್ರ ರಾಜಧಾನಿಯಲ್ಲಿ ಸಮ ಹಾಗೂ ಬೆಸ ನೋಂದಣಿ ಸಂಖ್ಯೆ ಆಧಾರದಲ್ಲಿ ಕಾರುಗಳ ಸಂಚಾರ ಕ್ರಮ ಜಾರಿಗೆ ಪ್ರಚೋದನೆ ನೀಡಬಹುದು.
ನಗರದಲ್ಲಿ ಗಾಳಿ ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಗುರುವಾರ ಸಂಜೆ 4ಕ್ಕೆ 419ರಷ್ಟಿತ್ತು. ಅದು ಇಂದು ಬೆಳಿಗ್ಗೆ 7ರ ಹೊತ್ತಿಗೆ 437ಕ್ಕೆ ಏರಿದೆ.
ರಾಜಧಾನಿಯಲ್ಲಿ ಪ್ರತಿದಿನ ಸಂಜೆ 4ಕ್ಕೆ ಎಕ್ಯೂಐ ಅನ್ನು ದಾಖಲಿಸಲಾಗಿದ್ದು, ವಾತಾವರಣ ಹದಗೆಡುತ್ತಿರುವುದು ಅಂಕಿ–ಅಂಶಗಳಿಂದ ಗೊತ್ತಾಗಿದೆ. ಶುಕ್ರವಾರ 279 ರಷ್ಟಿದ್ದ ಎಕ್ಯೂಐ, ಶನಿವಾರ 220ಕ್ಕೆ, ಭಾನುವಾರ 218ಕ್ಕೆ, ಸೋಮವಾರ 358ಕ್ಕೆ, ಮಂಗಳವಾರ 397ಕ್ಕೆ ಹಾಗೂ ಬುಧವಾರ 401ಕ್ಕೆ ತಲುಪಿತ್ತು.
ಹಬ್ಬಕ್ಕೂ ಮುನ್ನ ಸುರಿದ ಮಳೆಯು ದೆಹಲಿಯ ಗಾಳಿಯ ಗುಣಮಟ್ಟವನ್ನು ಸುಧಾರಿಸಿತ್ತು. ಇದರಿಂದಾಗಿ ದೀಪಾವಳಿ ಸಂದರ್ಭದಲ್ಲಿ ಕಳೆದ ಎಂಟು ವರ್ಷಗಳಲ್ಲೇ ಅತ್ಯುತ್ತಮ ಗಾಳಿಯ ಗುಣಮಟ್ಟ ನವೆಂಬರ್ 12ರಂದು ದಾಖಲಾಗಿತ್ತು. ಆದರೆ, ಇಲ್ಲಿನ ಜನರು ನಿಯಮಾವಳಿಗಳನ್ನು ಗಾಳಿಗೆ ತೂರಿ ಅದೇ ದಿನ ರಾತ್ರಿ ಹಾಗೂ ನಂತರದ ದಿನಗಳಲ್ಲಿ ಸಿಡಿಸಿದ ಪಟಾಕಿಯಿಂದಾಗಿ ಮತ್ತೆ ವಾತಾವರಣ ಹಾಳಾಗಿದೆ. ರಾಜಧಾನಿಯಾದ್ಯಂತ ದಟ್ಟ ಹೊಗೆ ಆವರಿಸಿದೆ. ಇದು ಬೇಗನೆ ಸುಧಾರಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಎಕ್ಯೂಐ ಪ್ರಮಾಣ ಸೊನ್ನೆಯಿಂದ 50 ರಷ್ಟಿದ್ದರೆ 'ಉತ್ತಮ' ಎಂದು, 51ರಿಂದ 100 ರಷ್ಟಿದ್ದರೆ 'ಸಮಾಧಾನಕರ', 101 ರಿಂದ 200 ರಷ್ಟಿದ್ದರೆ 'ಸಾಧಾರಣ', 201 ರಿಂದ 300 ರಷ್ಟಿದ್ದರೆ 'ಕಳಪೆ' ಹಾಗೂ 301 ರಿಂದ 400 ರಷ್ಟಿದ್ದರೆ 'ಅತ್ಯಂತ ಕಳಪೆ' ಎಂದು ಹೇಳಲಾಗುತ್ತದೆ. 401ರಿಂದ 450ರಷ್ಟು ಕಂಡು ಬಂದರೆ 'ತೀವ್ರ ಕಳಪೆ' ಹಾಗೂ 450ಕ್ಕಿಂತ ಹೆಚ್ಚಾದರೆ 'ತೀವ್ರಕ್ಕಿಂತಲೂ ಅಪಾಯಕಾರಿ' ಎಂದು ಪರಿಗಣಿಸಲಾಗುತ್ತದೆ.
ದೆಹಲಿ ಪರಿಸರ ಸಚಿವ ಗೋಪಾಲ್ ರಾಯ್ ಅವರು, ಎಕ್ಯೂಐ ಪ್ರಮಾಣ 450ರ ಗಡಿ ದಾಟಿದರೆ ಸಮ–ಬೆಸ ನಿಯಮ ಜಾರಿಗೊಳಿಸಲಾಗುತ್ತದೆ ಎಂದು ಈಗಾಗಲೇ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.