ನವದೆಹಲಿ: ದೇಶದ ರಾಜಧಾನಿ ದೆಹಲಿಯ ವಾಯು ಗುಣಮಟ್ಟ ಸೋಮವಾರ ಮತ್ತಷ್ಟು ಹದಗೆಟ್ಟಿದ್ದು, ಬೆಳಿಗ್ಗೆ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) 484ಕ್ಕೆ ತಲುಪುವ ಮೂಲಕ ‘ತೀವ್ರ ಅಪಾಯ’ದ ಹಂತ ತಲುಪಿತು.
ಮಧ್ಯಾಹ್ನ 2 ಗಂಟೆ ವೇಳೆಗೆ ಎಕ್ಯೂಐ 494ಕ್ಕೆ ಏರುವ ಮೂಲಕ ವಾತಾವರಣ ಮತ್ತಷ್ಟು ಬಿಗಡಾಯಿಸಿತು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ತಿಳಿಸಿದೆ. ಇದು ಈ ಋತುವಿನಲ್ಲಿ ತಲುಪಿದ ಅತ್ಯಂತ ಕಳಪೆ ಮಟ್ಟವಾಗಿದೆ ಎಂದು ಅದು ಹೇಳಿದೆ.
ದಟ್ಟವಾದ ವಿಷಕಾರಿ ಹೊಗೆ ಹಾಗೂ ಮಂಜು (ಹೊಂಜು) ಮುಸುಕಿದ ಕಾರಣ ಬೆಳಿಗ್ಗೆ ಗೋಚರತೆ ಪ್ರಮಾಣವೂ ತೀವ್ರವಾಗಿ ಕುಸಿದಿತ್ತು. ಅಧಿಕಾರಿಗಳ ಪ್ರಕಾರ ಸಫ್ದರ್‌ಜಂಗ್ ವಿಮಾನ ನಿಲ್ದಾಣದಲ್ಲಿ 150 ಮೀಟರ್‌ನಷ್ಟು ದೂರದವರೆಗೆ ಮಾತ್ರ ಗೋಚರತೆ ಇತ್ತು.
ಕೆಲವೆಡೆ ಎಕ್ಯೂಐ 500ಕ್ಕೇರಿಕೆ:‘ಸಮೀರ್ ಆ್ಯಪ್’ ದತ್ತಾಂಶದ ಪ್ರಕಾರ, ದೆಹಲಿ ವ್ಯಾಪ್ತಿಯ ದ್ವಾರಕಾ, ನಜಾಫ್‌ಗಢ, ನೆಹರೂ ನಗರ ಮತ್ತು ಮುಂಡ್ಕಾದ ಮೇಲ್ವಿಚಾರಣಾ ಕೇಂದ್ರಗಳಲ್ಲಿ ಎಕ್ಯೂಐ ಮಟ್ಟ ಗರಿಷ್ಠ 500ಕ್ಕೆ ಏರಿರುವ ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇನ್ನೂ ಮೂರು ದಿನಗಳು ದೆಹಲಿಯಲ್ಲಿ ದಟ್ಟವಾದ ಮಂಜು ಆವರಿಸಿರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಣ್ಣಿನಲ್ಲಿ ನೀರು ಜಿನುಗಿ, ಕಣ್ಣುಜ್ಜುವಂತೆ ಜನರಿಗೆ ಆಗುತ್ತಿರುವುದರಿಂದ ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಈ ಹಂತದಲ್ಲಿ ಎನ್95 ಮಾಸ್ಕ್‌ಗಳನ್ನು ಬಳಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ದೆಹಲಿಯಲ್ಲಿ ಭಾನುವಾರ ಸಂಜೆ 4 ಗಂಟೆಗೆ ಎಕ್ಯೂಐ 441ರಷ್ಟಿತ್ತು. ಅಂದು ರಾತ್ರಿ 7 ಗಂಟೆಗೆ 457ಕ್ಕೆ ಏರಿಕೆಯಾಗಿತ್ತು. ಎಕ್ಯೂಐ 450 ದಾಟುತ್ತಿದ್ದಂತೆ ವಾಯುಗುಣಮಟ್ಟ ನಿರ್ವಹಣೆ ಆಯೋಗವು ದೆಹಲಿ ಎನ್‌ಸಿಆರ್‌ನಲ್ಲಿ ‘ಜಿಆರ್‌ಎಪಿ –4’ (ಗ್ರೇಡೆಡ್ ರೆಸ್ಪಾನ್ಸ್
ಆ್ಯಕ್ಷನ್ ಪ್ಲ್ಯಾನ್) ನಿರ್ಬಂಧಗಳನ್ನು ಜಾರಿಗೊಳಿಸಲು ಆದೇಶಿಸಿತು. ದೆಹಲಿ ಸರ್ಕಾರವು ಸೋಮವಾರ ಬೆಳಿಗ್ಗೆಯಿಂದ ಟ್ರಕ್‌ಗಳ ಪ್ರವೇಶ ನಿಷೇಧ, ಸಾರ್ವಜನಿಕ ನಿರ್ಮಾಣ ಯೋಜನೆಗಳನ್ನು ಸ್ಥಗಿತ, ಸರ್ಕಾರಿ ಮತ್ತು ಮುನ್ಸಿಪಲ್ ಸಿಬ್ಬಂದಿಯ ಕಚೇರಿ ಸಮಯ ಬದಲು ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ.
ಏನೇನು ನಿರ್ಬಂಧ?
* ಅಗತ್ಯ ವಸ್ತುಗಳನ್ನು ಸಾಗಿಸುವ ಅಥವಾ ಶುದ್ಧ ಇಂಧನ (ಎಲ್‌ಎನ್‌ಜಿ/ಸಿಎನ್‌ಜಿ/ಬಿಎಸ್–6 ಡೀಸೆಲ್/ ಎಲೆಕ್ಟ್ರಿಕ್) ಬಳಸುವ ವಾಹನಗಳನ್ನು ಹೊರತುಪಡಿಸಿ ಯಾವುದೇ ಟ್ರಕ್‌ಗಳು ದೆಹಲಿ ಪ್ರವೇಶಿಸುವಂತಿಲ್ಲ
* ಇ.ವಿಗಳು, ಸಿಎನ್‌ಜಿ ಮತ್ತು ಬಿಎಸ್–6 ಡೀಸೆಲ್ ವಾಹನ
ಗಳನ್ನು ಹೊರತುಪಡಿಸಿ ದೆಹಲಿಯ ಹೊರಗೆ ನೋಂದಾ
ಯಿಸಲಾದ, ಲಘು ವಾಣಿಜ್ಯ ವಾಹನಕ್ಕೆ ನಿಷೇಧ
* ದೆಹಲಿಯಲ್ಲಿ ನೋಂದಾಯಿತ ಬಿಎಸ್–4 ಅಥವಾ ಹಳೆಯ ಡೀಸೆಲ್ ಮಧ್ಯಮ ಮತ್ತು ಭಾರಿ ಸರಕು ವಾಹನಗಳಿಗೂ ನಿಷೇಧ. ಅಗತ್ಯ ಸೇವೆಗಳಿಗೆ ಬಳಸುವ ವಾಹನಗಳಿಗೆ ಮಾತ್ರ ಅನುಮತಿ
* ಹೆದ್ದಾರಿ, ರಸ್ತೆಗಳು, ಮೇಲ್ಸೇತುವೆಗಳು, ವಿದ್ಯುತ್ ಮಾರ್ಗಗಳು, ಪೈಪ್‌ಲೈನ್‌ಗಳು ಹಾಗೂ ಇತರ ಸಾರ್ವಜನಿಕ ಯೋಜನೆಗಳು ಸೇರಿದಂತೆ ಎಲ್ಲ ನಿರ್ಮಾಣ ಕಾಮಗಾರಿಗಳು ಸ್ಥಗಿತ
* ಎನ್‌ಸಿಆರ್ ವ್ಯಾಪ್ತಿಯ ಕಚೇರಿಗಳು ಶೇ 50ರಷ್ಟು ಸಿಬ್ಬಂದಿಯಿಂದ ಕಾರ್ಯನಿರ್ವಹಿಸಬೇಕು. ಉಳಿದ ಸಿಬ್ಬಂದಿಗೆ ಮನೆಯಲ್ಲಿ ಕಾರ್ಯನಿರ್ವಹಿಸಲು
ಅವಕಾಶ ನೀಡಬೇಕು ಎಂದು ಶಿಫಾರಸು
ಮಾಡಲಾಗಿದೆ
* ದೆಹಲಿಯಲ್ಲಿ ಎಲ್ಲ ಶಾಲೆಗಳಲ್ಲಿ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಹೊರತುಪಡಿಸಿ ಉಳಿದವರಿಗೆ ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.