ನವದೆಹಲಿ: ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಪೂರ್ಣ ದೇಹವನ್ನು ಸ್ಕ್ಯಾನ್ ಮಾಡುವ ವ್ಯವಸ್ಥೆಯನ್ನು ಬರುವ ಮೇ ಒಳಗಾಗಿ ಅಳವಡಿಸಲಾಗುತ್ತದೆ.
ಇದರ ಜೊತೆಗೆ, ಕಂಪ್ಯೂಟೆಡ್ ಟೊಮೊಗ್ರಾಫಿ ಎಕ್ಸ್ ರೆ (ಸಿಟಿಎಕ್ಸ್) ಯಂತ್ರಗಳನ್ನು ಸಹ ಅಳವಡಿಸಲಾಗುತ್ತದೆ ಎಂದು ನಾಗರಿಕ ವಿಮಾನ ಭದ್ರತಾ ಬ್ಯುರೊದ (ಬಿಸಿಎಎಸ್) ನಿರ್ದೇಶಕ ಜನರಲ್ ಜುಲ್ಫೀಕರ್ ಹಸನ್ ಶುಕ್ರವಾರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ದೇಶದ ಇತರ ವಿಮಾನ ನಿಲ್ದಾಣಗಳಲ್ಲಿ ಸ್ಕ್ಯಾನರ್‌ಗಳು ಹಾಗೂ ಸಿಟಿಎಕ್ಸ್ ಯಂತ್ರಗಳನ್ನು ಅಳವಡಿಸುವ ಗಡುವನ್ನು ವಿಸ್ತರಿಸಲಾಗುತ್ತದೆ ಎಂದರು.
ಸಿಟಿಎಕ್ಸ್ ಯಂತ್ರಗಳ ನೆರವಿನಿಂದ ತಪಾಸಣೆ ನಡೆಸಿದಾಗ, ಪ್ರಯಾಣಿಕರು ತಮ್ಮ ಬ್ಯಾಗುಗಳಲ್ಲಿರುವ ಎಲೆಕ್ಟ್ರಾನಿಕ್ ವಸ್ತುಗಳನ್ನು ಹೊರಗೆ ತೆಗೆಯುವ ಅಗತ್ಯವಿರುವುದಿಲ್ಲ.
ವರ್ಷಕ್ಕೆ ಕೋಟಿಗೂ ಅಧಿಕ ಪ್ರಯಾಣಿಕರ ದಟ್ಟಣೆ ಇರುವ ವಿಮಾನ ನಿಲ್ದಾಣಗಳಲ್ಲಿ ಸ್ಕ್ಯಾನರ್‌ಗಳನ್ನು ಅಳವಡಿಸಲು ಮುಂದಿನ ವರ್ಷ ಡಿ.31 ಕೊನೆಯ ದಿನವಾಗಿದೆ. 50 ಲಕ್ಷಕ್ಕೂ ಅಧಿಕ ಪ್ರಯಾಣಿಕರ ದಟ್ಟಣೆ ಇರುವ ವಿಮಾನ ನಿಲ್ದಾಣಗಳಲ್ಲಿ ಇದೇ ಗಡುವಿನೊಳಗೆ ಸಿಟಿಎಕ್ಸ್ ಯಂತ್ರಗಳನ್ನು ಅಳವಡಿಸಬೇಕು ಎಂದು ಜನರಲ್ ಹಸನ್ ತಿಳಿಸಿದರು.
ದೆಹಲಿ ವಿಮಾನ ನಿಲ್ದಾಣವು ದೇಶದ ಅತಿದೊಡ್ಡ ವಿಮಾನನಿಲ್ದಾಣವಾಗಿದೆ. ಮುಂದಿನ ಮಾರ್ಚ್ ಒಳಗಾಗಿ, ಈ ನಿಲ್ದಾಣದ ಮೂಲಕ ಪ್ರಯಾಣಿಸುವವರ ಸಂಖ್ಯೆ ವಾರ್ಷಿಕ 7 ಕೋಟಿ ದಾಟುವ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.