ನವದೆಹಲಿ: ದೆಹಲಿ ವಾಯುಮಾಲಿನ್ಯದ ಮಟ್ಟ ಭಾರಿ ಉಲ್ಬಣಗೊಂಡ ಕಾರಣ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಗರದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಪ್ರಾಥಮಿಕ ಶಾಲೆಗಳಿಗೆ ಇಂದು ಮತ್ತು ನಾಳೆ ರಜೆ ಘೋಷಿಸಿದ್ದಾರೆ.
ಹೆಚ್ಚುತ್ತಿರುವ ಮಾಲಿನ್ಯದ ಹಿನ್ನೆಲೆ ದೆಹಲಿಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಪ್ರಾಥಮಿಕ ಶಾಲೆಗಳನ್ನು ನ.3 ಹಾಗೂ ನ.4ರಂದು ಮುಚ್ಚಲಾಗುವುದು ಎಂದು ಕೇಜ್ರಿವಾಲ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ನಡುವೆ, ಗುರುಗ್ರಾಮ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೂಡ ಗುರುಗ್ರಾಮದಲ್ಲಿ ವಾಯು ಮಾಲಿನ್ಯ ತಡೆಯಲು ಕ್ರಿಮಿನಲ್ ಪ್ರೊಸೀಜರ್ ಆಕ್ಟ್, 1973ರ ಸೆಕ್ಷನ್ 144ರ ಅಡಿಯಲ್ಲಿ ಆದೇಶ ಹೊರಡಿಸಿದ್ದಾರೆ.
ಗುರುಗ್ರಾಮ ಪ್ರದೇಶದಲ್ಲಿ ಕಸ, ಎಲೆ, ಪ್ಲಾಸ್ಟಿಕ್ ಮತ್ತು ರಬ್ಬರ್‌ನಂತಹ ತ್ಯಾಜ್ಯ ವಸ್ತುಗಳನ್ನು ಸುಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸಲಾಗುವುದು. ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಈ ಆದೇಶವನ್ನು ಗುರುಗ್ರಾಮ ಜಿಲ್ಲೆಯಾದ್ಯಂತ ಜಾರಿಗೊಳಿಸಲಾಗಿದೆ. ನಮ್ಮ ಸುತ್ತಮುತ್ತಲಿನ ಪರಿಸರ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳೋಣ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮನವಿ ಮಾಡಿದ್ದಾರೆ.
ದೆಹಲಿಯ ಗಾಳಿಯ ಗುಣಮಟ್ಟ ಅತ್ಯಂತ ಕಳಪೆಯಾಗಿದೆ. ನ.2ರ ಸಂಜೆ 4ಗಂಟೆಗೆ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 392ರಲ್ಲಿ ದಾಖಲಾಗಿದೆ ಎಂದು ಸಿಎಕ್ಯೂಎಂ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಿದೆ. ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಗಟ್ಟಲು ವಾಯು ಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎಂ) 3ನೇ ಹಂತದ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (ಜಿಆರ್‌ಎಪಿ)ಯನ್ನು ಜಾರಿಗೊಳಿಸಿದೆ. ಇದರ ಅಡಿ ದೆಹಲಿ ಹಾಗೂ ಎನ್‌ಸಿಆರ್‌ನಲ್ಲಿ ಎಲ್ಲಾ ರೀತಿಯ ವಸತಿ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ನಿರ್ಮಾಣ ಕಾರ್ಯವನ್ನು ನಿಷೇಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.