ADVERTISEMENT

ದೆಹಲಿ: ಆಪ್‌–ಕಾಂಗ್ರೆಸ್‌ ಶೂನ್ಯ ಸಾಧನೆ

​ಪ್ರಜಾವಾಣಿ ವಾರ್ತೆ
Published 23 ಮೇ 2019, 19:45 IST
Last Updated 23 ಮೇ 2019, 19:45 IST
   

ನವದೆಹಲಿ: ದೆಹಲಿಯ ಎಲ್ಲ ಏಳು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ‘ಕ್ಲೀನ್‌ಸ್ವೀಪ್‌’ ಸಾಧನೆ ಮಾಡಿದ್ದು, ಆಮ್‌ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್‌ ತೀವ್ರ ನಿರಾಸೆ ಅನುಭವಿಸಿವೆ.

ಬಿಜೆಪಿಯ ಮೂರಕ್ಕೂ ಹೆಚ್ಚು ಅಭ್ಯರ್ಥಿಗಳು ಮೂರು ಲಕ್ಷಕ್ಕೂ ಹೆಚ್ಚು ಅಂತರದಿಂದ ಗೆಲುವು ಸಾಧಿಸಿರುವುದು ಪಕ್ಷದ ಪ್ರಭಾವವನ್ನು ಸೂಚಿಸುತ್ತಿದೆ.

2014ರ ಚುನಾವಣೆಯಲ್ಲಿಯೂ ಎಲ್ಲ ಏಳು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ, ಮರುವರ್ಷವೇ ನಡೆದ ವಿಧಾನಸಭಾ ಚುನಾವಣೆಯಲ್ಲಿ 70 ಕ್ಷೇತ್ರಗಳ ಪೈಕಿ ಕೇವಲ 3ರಲ್ಲಿ ಜಯ ಸಾಧಿಸಿತ್ತು. ಆಮ್‌ ಆದ್ಮಿ ಪಕ್ಷ ಜಯಭೇರಿ ಬಾರಿಸುವ ಮೂಲಕ ದೇಶದ ಗಮನ ಸೆಳೆದಿತ್ತು. ಈಗ ಮತ್ತೆ ಕ್ಲೀನ್‌ಸ್ವೀಪ್‌ ಸಾಧನೆ ಮಾಡಿದೆ. ಆದರೆ, ಮುಂದಿನ ಫೆಬ್ರುವರಿಯಲ್ಲಿ ಮತ್ತೆ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಜ್ಜಾಗಬೇಕಿದೆ.

ADVERTISEMENT

‘ದೆಹಲಿಯಲ್ಲಿ ಮೊದಲ ಸವಾಲನ್ನು ಯಶಸ್ವಿಯಾಗಿ ಎದುರಿಸಿದ್ದೇವೆ. ಮುಂದಿನ ಫೆಬ್ರುವರಿಯಲ್ಲಿ (ವಿಧಾನಸಭಾ ಚುನಾವಣೆ)ಎರಡನೇ ಸವಾಲನ್ನು ಎದುರಿಸಲು ಸಿದ್ಧವಾಗುತ್ತಿದ್ದೇವೆ‘ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್‌ ತಿವಾರಿ ಹೇಳಿದ್ದಾರೆ.

ನಿರೀಕ್ಷೆಗೂ ಮೀರಿದ ಜಯ: ಬಿಜೆಪಿಯೇ ನಿರೀಕ್ಷೆ ಮಾಡಿರದ ಅಭೂತಪೂರ್ವ ಗೆಲುವನ್ನು ಮತದಾರರು ಪಕ್ಷಕ್ಕೆ ನೀಡಿದ್ದಾರೆ.

ಬಿಜೆಪಿಯ ಪಶ್ಚಿಮ ದೆಹಲಿ ಸಂಸದ ಪರ್ವೇಶ್‌ ವರ್ಮಾ 3.49 ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್‌ನ ಮಹಾಬಲ ಮಿಶ್ರಾರನ್ನು ಪರಾಭವಗೊಳಿಸಿದ್ದಾರೆ. 2014ರಲ್ಲಿ ವರ್ಮಾ 2.68 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ನೈರುತ್ಯ ದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ, ಗಾಯಕ ಹನ್ಸ್‌ರಾಜ್‌ ಆಮ್‌ ಆದ್ಮಿ ಪಕ್ಷದ ಗುಗನ್‌ ಸಿಂಗ್‌ರನ್ನು 3.40 ಲಕ್ಷ ಮತಗಳ ಭಾರಿ ಅಂತರದಿಂದ ಸೋಲಿಸಿದ್ದಾರೆ. ಈಶಾನ್ಯ ದೆಹಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕಿ ಶೀಲಾ ದೀಕ್ಷಿತ್‌ರನ್ನು ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ಮನೋಜ್‌ ತಿವಾರಿ 2.99 ಲಕ್ಷ ಮತಗಳ ಅಂತರದಿಂದ ಸೋಲುಣಿಸಿದ್ದಾರೆ.

ಗಂಭೀರ್‌ ಗೆಲುವು: ಪೂರ್ವ ದೆಹಲಿಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದಕ್ರಿಕೆಟಿಗ ಗೌತಮ್‌ ಗಂಭೀರ್‌ ಮೊದಲ ಪ್ರಯತ್ನದಲ್ಲೇ ಗೆಲುವಿನ ಸಿಕ್ಸರ್‌ ಬಾರಿಸಿದ್ದಾರೆ. 2.38 ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್‌ನ ಅರವಿಂದರ್‌ ಸಿಂಗ್‌ರನ್ನು ಅವರು ಸೋಲಿಸಿದ್ದಾರೆ.ನವದೆಹಲಿಯ ಹಾಲಿ ಸಂಸದೆ ಮೀನಾಕ್ಷಿ ಲೇಖಿ ತಮ್ಮ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

***

ದೆಹಲಿಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡುತ್ತದೆ ಎಂಬ ನಿರೀಕ್ಷೆಯಿತ್ತು. ಆದರೆ, ಇಂಥ ಅಭೂತಪೂರ್ವ ಗೆಲುವು ಸಾಧ್ಯವಾಗುತ್ತದೆ ಎಂಬ ನಿರೀಕ್ಷೆಯಿರಲಿಲ್ಲ

–ಮನೋಜ್‌ ತಿವಾರಿ ,ದೆಹಲಿ ಬಿಜೆಪಿ ಅಧ್ಯಕ್ಷ, ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.