ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ದೆಹಲಿ ವಿಧಾನಸಭೆ ಚುನಾವಣೆಗೂ ಮುನ್ನ 'ಜನ ಸಂಪರ್ಕ' ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿದ್ದಾರೆ.
ತಮ್ಮನ್ನು ಹಾಗೂ ಪಕ್ಷದ ಇತರ ನಾಯಕರನ್ನು ಭ್ರಷ್ಟಾಚಾರ ಪ್ರಕರಣಗಳಲ್ಲಿ ಬಂಧಿಸಿದ್ದರ ಹಿಂದಿನ 'ಸತ್ಯ'ದ ಬಗ್ಗೆ ಕೇಜ್ರಿವಾಲ್ ಪತ್ರ ಬರೆದಿದ್ದಾರೆ. ಅಭಿಯಾನದಲ್ಲಿ ಪಾಲ್ಗೊಳ್ಳುವ ಎಎಪಿ ಕಾರ್ಯಕರ್ತರು ಆ ಪತ್ರದಲ್ಲಿನ ಅಂಶಗಳನ್ನು ದೆಹಲಿಯ ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 'ಪತ್ರ ಬರೆದಿದ್ದೇನೆ. ನಮ್ಮ ಕಾರ್ಯಕರ್ತರು ಆ ಪತ್ರವನ್ನು ಹಿಡಿದು ಅಕ್ಟೋಬರ್ 29ರ ವರೆಗೆ ಪ್ರತಿಯೊಬ್ಬರ ಮನೆ ಬಾಗಿಲಿಗೆ ಹೋಗಲಿದ್ದಾರೆ' ಎಂದಿದ್ದಾರೆ.
'ನಾನು ಭ್ರಷ್ಟನಲ್ಲ. ದೆಹಲಿಯಲ್ಲಿ ಎಎಪಿ ಸರ್ಕಾರ ಜನರಿಗಾಗಿ ಮಾಡುತ್ತಿರುವ ಕೆಲಸವನ್ನು ತಡೆಯುವ ಸಲುವಾಗಿ ಬಿಜೆಪಿಯವರು ನನ್ನನ್ನು ಜೈಲಿಗೆ ಕಳುಹಿಸಿದರು' ಎಂದು ಆರೋಪಿಸಿದ್ದಾರೆ.
ಪತ್ರವನ್ನು ತೋರಿಸುತ್ತಾ, 'ಅವರು (ಬಿಜೆಪಿಯವರು) ನನ್ನನ್ನು ಬಂಧಿಸಿ ಐದು ತಿಂಗಳು ಜೈಲಿನಲ್ಲಿಟ್ಟರು. ಆದರೂ, ದೆಹಲಿ ಜನರಿಗೆ ನಾನು ನೀಡಿದ ಸೌಲಭ್ಯಗಳನ್ನು ಮತ್ತು ಇತರ ಕೆಲಸಗಳನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ' ಎಂದು ಕುಟುಕಿದ್ದಾರೆ.
ದೆಹಲಿ ಸರ್ಕಾರ ಸದ್ಯ ಹಿಂಪಡೆದಿರುವ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಕೇಜ್ರಿವಾಲ್ ಅವರು ಕಳೆದ ತಿಂಗಳಷ್ಟೇ ಜಾಮೀನಿನ ಮೇಲೆ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಬಳಿಕ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ನಂತರ ಆತಿಶಿ ಮುಖ್ಯಮಂತ್ರಿಯಾಗಿದ್ದಾರೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ 2025ರ ಆರಂಭದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.