ನವದೆಹಲಿ: 2025ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ ತನ್ನ 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.
ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ನಡೆದ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ) ಸಭೆಯ ನಂತರ ಅಭ್ಯರ್ಥಿ ಹೆಸರನ್ನು ಘೋಷಿಸಲಾಗಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ತೊರೆದು ಎಎಪಿ ಸೇರಿದ ಆರು ನಾಯಕರ ಹೆಸರು ಪಟ್ಟಿಯಲ್ಲಿದೆ.
ಬಿಜೆಪಿಯಿಂದ ಬಂದ ಬ್ರಹ್ಮ್ ಸಿಂಗ್ ತಂವರ್ (ಛತ್ತರ್‌ಪುರ), ಅನಿಲ್ ಝಾ (ಕಿರಾರಿ), ಬಿ.ಬಿ. ತ್ಯಾಗಿ (ಲಕ್ಷ್ಮೀನಗರ) ಮತ್ತು ಕಾಂಗ್ರೆಸ್‌ನಿಂದ ಎಎಪಿ ಸೇರಿದ ಜುಬೈರ್ ಚೌಧರಿ (ಸಲೀಂಪುರ), ವೀರ್ ಸಿಂಗ್ ಧಿಂಗಾನ್ (ಸೀಮಾಪುರಿ) ಮತ್ತು ಸುಮೇಶ್ ಶೌಕೀನ್ (ಮಟಿಯಾಲ) ಅವರಿಗೆ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.
ಸರಿತಾ ಸಿಂಗ್ (ರೋಹ್ತಾಸ್ ನಗರ), ರಾಮ್ ಸಿಂಗ್ ನೇತಾಜಿ (ಬದರಪುರ) , ಗೌರವ್ ಶರ್ಮ (ಘೊಂಡಾ), ಮನೋಜ್ ತ್ಯಾಗಿ (ಕರವಲ್ ನಗರ) ಮತ್ತು ದೀಪಕ್ ಸಿಂಘಲ್ (ವಿಶ್ವಾಸ್ ನಗರ) ಎಎಪಿ ಪಕ್ಷ ಘೋಷಿಸಿದ ಇತರ ಹೆಸರುಗಳಾಗಿವೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ 2025ರ ಫೆಬ್ರುವರಿಯಲ್ಲಿ ಮತದಾನ ನಡೆಯಲಿದೆ.
2020ರಲ್ಲಿ ನಡೆದ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ ಎಎಪಿ 62 ಸ್ಥಾನಗಳಲ್ಲಿ ಗೆದ್ದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.