ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿದ್ಯುತ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಎಎಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ವಿರೇಂದ್ರ ಸಚ್‌ದೇವ, ‘ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಸರ್ಕಾರ ಪ್ರತಿ ಯೂನಿಟ್ ವಿದ್ಯುತ್ ವೆಚ್ಚವನ್ನು ಪರಿಗಣಿಸದೆ ವಿದ್ಯುತ್ ಖರೀದಿ ಹೊಂದಾಣಿಕೆ ಶುಲ್ಕವನ್ನು (ಪಿಪಿಎಸಿ) ಹೆಚ್ಚಿಸಿದೆ’ ಎಂದು ಹೇಳಿದ್ದಾರೆ.
ದೆಹಲಿಗೆ ಪಿಪಿಎಸಿಯನ್ನು ತಂದವರೇ ಸಿಎಂ ಅರವಿಂದ ಕೇಜ್ರಿವಾಲ್ ಅವರು ಎಂದು ಹೇಳಿದ ಸಚ್‌ದೇವ, 2015ರಲ್ಲಿ ಪಿಪಿಎಸಿಯು ಶೇ 1.7 ರಷ್ಟಿತ್ತು ಮತ್ತು ಈಗ ಅದು ಶೇ 46 ರಷ್ಟಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪಿಪಿಎಸಿಯು ಡಿಸ್ಕಾಂಗಳಿಂದ ಉಂಟಾದ ವಿದ್ಯುತ್ ಖರೀದಿ ವೆಚ್ಚದಲ್ಲಿನ ಏರಿಳಿತಗಳನ್ನು ಸರಿದೂಗಿಸುವ ಹೆಚ್ಚುವರಿ ಶುಲ್ಕವಾಗಿದೆ.
ಪ್ರತಿಭಟನಾ ಮೆರವಣಿಗೆ ಮಾಡಲು ಪ್ರಯತ್ನಿಸಿದ ಬಿಜೆಪಿ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಈ ವೇಳೆ ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿಯಲು ಯತ್ನಿಸಿದ ಸಚ್‌ದೇವ ಸೇರಿದಂತೆ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ.
ವಿದ್ಯುತ್ ಶುಲ್ಕ ಹೆಚ್ಚಳದ ಕುರಿತು ಬಿಜೆಪಿ ವದಂತಿ ಹಬ್ಬಿಸುತ್ತಿದೆ ಎಂದು ಸಚಿವೆ ಅತಿಶಿ ಈ ಹಿಂದೆ ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.