ನವದೆಹಲಿ: ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಶುಕ್ರವಾರ ಸ್ಫೋಟ ಸಂಭವಿಸಿದ ಸ್ಥಳದ ಸುತ್ತುಮುತ್ತ 45,000 ಮೊಬೈಲ್ ಫೋನ್‌ಗಳು ಸಕ್ರಿಯವಾಗಿದ್ದವು ಎಂದು ಮೂಲಗಳು ತಿಳಿಸಿವೆ.
ಜನವರಿ 29 ಶುಕ್ರವಾರ ಸಂಜೆ ಕಡಿಮೆ ತೀವ್ರತೆಯ ಸುಧಾರಿತ ಸ್ಫೋಟ ಸಾಧನ (ಐಇಡಿ) ಸ್ಫೋಟಿಸಿತ್ತು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಗಾಯದ ಬಗ್ಗೆ ವರದಿಯಾಗಿಲ್ಲ.
ಮೊಬೈಲ್ ಟವರ್‌ನ ಅಂಕಿಅಂಶಗಳನ್ನು ಪರಿಶೀಲಿಸಿದ ತನಿಖಾಧಿಕಾರಿಗಳು, ಸ್ಫೋಟದ ಸ್ಥಳ ಹಾಗೂ ಸುತ್ತುಮುತ್ತ 45,000 ಮೊಬೈಲ್ ಫೋನ್‌ಗಳು ಸಕ್ರಿಯವಾಗಿರುವುದನ್ನು ಪತ್ತೆ ಹಚ್ಚಿವೆ ಎಂಬುದನ್ನು ಎಎನ್‌ಐ ವರದಿ ಮಾಡಿದೆ.
ಹಾಗಿದ್ದರೂ ಘಟನೆಯ ಸಂದರ್ಭದಲ್ಲಿ ದುಷ್ಕರ್ಮಿಗಳು ತಮ್ಮೊಂದಿಗೆಮೊಬೈಲ್ ಫೋನ್ ಇಟ್ಟುಕೊಂಡಿದ್ದಾರೆಯೇ ಎಂಬುದು ತಿಳಿದು ಬಂದಿಲ್ಲ.
ಸಿಸಿಟಿವಿ ದೃಶ್ಯ ಸೆರೆ...
ದೆಹಲಿ ಪೊಲೀಸ್‌ನ ಸ್ಪೆಷಲ್ ಸೆಲ್ ತಂಡವು ಶನಿವಾರದಂದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕ್ಯಾಬ್‌ನಿಂದ ಇಬ್ಬರು ವ್ಯಕ್ತಿಗಳು ಇಳಿದು ಬಂದಿರುವುದನ್ನು ಪತ್ತೆ ಹಚ್ಚಿದೆ. ಇವರಿಗೆ ಸ್ಫೋಟದಲ್ಲಿ ಏನಾದರೂ ಪಾತ್ರವಿದೆಯೇ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ.
ಸ್ಫೋಟ ನಡೆದ ಸ್ಥಳದ ಬಳಿ ಮರದ ಹಿಂದೆಯಿದ್ದ ರಹಸ್ಯ ಕ್ಯಾಮೆರಾದ ತುಣುಕುಗಳನ್ನು ದೆಹಲಿ ಪೊಲೀಸ್ ಸೈಬರ್‌ಕ್ರೈಮ್ ವಿಭಾಗ, ಸೈಬರ್ ತಡೆಗಟ್ಟುವಿಕೆ ಹಾಗೂ ಪತ್ತೆ ಹಚ್ಚುವಿಕೆ ಕೇಂದ್ರಕ್ಕೆ ರವಾನಿಸಲಾಗಿದೆ.
ಅರ್ಧ ಸುಟ್ಟ ಕೆಂಪು ಬಟ್ಟೆ ಪತ್ತೆ...
ಇಸ್ರೇಲ್ ರಾಯಭಾರ ಕಚೇರಿ ಬಳಿಯ ಸ್ಫೋಟದ ಸ್ಥಳದಿಂದ ಅರ್ಧ ಸುಟ್ಟ ಕೆಂಪು ಬಟ್ಟೆ ಹಾಗೂ ಪಾಲಿಥೀನ್ ಚೀಲವನ್ನು ಪತ್ತೆಯಾಗಿದೆ. ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ತನಿಖೆಯ ಭಾಗವಾಗಿ ರಾಜಧಾನಿಯಲ್ಲಿ ವಾಸಿಸುತ್ತಿರುವ ಇರಾನಿ ಪ್ರಜೆಗಳನ್ನು ಪ್ರಶ್ನಿಸಲಾಗುತ್ತಿದೆ. ಪ್ರಮುಖವಾಗಿಯೂ ವೀಸಾ ಅವಧಿ ಮುಗಿದ ಬಳಿಕವೂ ದೇಶದಲ್ಲಿಅನಧಿಕೃತವಾಗಿ ಮುಂದುವರಿಯುತ್ತಿರುವವರ ಮೇಲೆ ನಿಗಾ ವಹಿಸಲಾಗಿದೆ.
ಸ್ಫೋಟ ನಡೆದ ಕೆಲವೇ ಅಂತರದಲ್ಲಿ ಗಣರಾಜ್ಯೋತ್ಸವ ಸಂಭ್ರಮದ ಅಧಿಕೃತ ಮುಕ್ತಾಯದ ಅಂಗವಾಗಿ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ, ರಕ್ಷಣಾ ಸಚಿವರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.