ಚಂಡೀಗಢ: ರಾಷ್ಟ್ರರಾಜಧಾನಿಯಲ್ಲಿ ರೈತರು ನಡೆಸುತ್ತಿರುವ 'ದೆಹಲಿ ಚಲೋ' ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟಿದ್ದು, ಹರಿಯಾಣದ 7 ಜಿಲ್ಲೆಗಳಲ್ಲಿ ಇಂಟರ್ನೆಟ್ ಹಾಗೂ ಎಸ್‌ಎಂಎಸ್ ಸೇವೆಯನ್ನು ಫೆಬ್ರುವರಿ 15ರ ವರೆಗೆ ನಿರ್ಬಂಧಿಸಲಾಗಿದೆ.
'ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನಿನ ಖಾತರಿ' ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಜಾ ಕರೆ ನೀಡಿರುವ 'ದೆಹಲಿ ಚಲೊ' ಪ್ರತಿಭಟನಾ ಮೆರವಣಿಗೆ ಮಂಗಳವಾರ ಆರಂಭವಾಗಿದೆ. ಪ್ರತಿಭಟನೆಯಲ್ಲಿ ಸಾವಿರಾರು ರೈತರು ಪಾಲ್ಗೊಂಡಿದ್ದಾರೆ.
ಹರಿಯಾಣ ಗಡಿ ಪ್ರದೇಶಗಳಲ್ಲಿ ಪೊಲೀಸರು ಅಳವಡಿಸಿರುವ ಬ್ಯಾರಿಕೇಡ್‌ಗಳನ್ನು ದಾಟಿ, ದೆಹಲಿಗೆ ನುಗ್ಗಲು ಪ್ರಯತ್ನಿಸಿದ ರೈತರನ್ನು ತಡೆಯಲು ಪೊಲೀಸರು ಮಂಗಳವಾರ ಅಶ್ರುವಾಯು ಸಿಡಿಸಿದರು.
ಎರಡನೇ ದಿನವೂ ಪ್ರತಿಭಟನೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಹರಿಯಾಣ ಸರ್ಕಾರವು ಗಡಿ ಜಿಲ್ಲೆಗಳಾದ ಅಂಬಾಲ, ಕುರುಕ್ಷೇತ್ರ, ಕೈತಾಲ್, ಸಿಂದ್, ಹಿಸಾರ್, ಫತೇಹಬಾದ್ ಮತ್ತು ಸಿರ್ಸಾದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿದೆ.
ಹರಿಯಾಣದ ಹೆಚ್ಚವರಿ ಮುಖ್ಯಕಾರ್ಯದರ್ಶಿಟಿ.ವಿ.ಎಸ್.ಎನ್ ಪ್ರಸಾದ್ ಈ ಕುರಿತು ಮಾತನಾಡಿದ್ದಾರೆ. 'ರಾಜ್ಯದ ಅಂಬಾಲ, ಕುರುಕ್ಷೇತ್ರ, ಕೈತಾಲ್, ಸಿಂದ್, ಹಿಸಾರ್, ಫತೇಹಬಾದ್ ಮತ್ತು ಸಿರ್ಸಾ ಜಿಲ್ಲೆಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯು ಈಗಲೂ ಗಂಭೀರ ಸ್ಥಿತಿಯಲ್ಲಿದೆ' ಎಂದಿದ್ದಾರೆ.
'ಮೇಲೆ ತಿಳಿಸಲಾಗಿರುವ ಜಿಲ್ಲೆಗಳಲ್ಲಿ ಸಾರ್ವಜನಿಕ ಆಸ್ತಿ, ಸೌಕರ್ಯಗಳಿಗೆ ಹಾನಿ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗಿರುವುದು ಸ್ಪಷ್ಟವಾಗಿದೆ. ಸುಳ್ಳು ಸುದ್ದಿಗಳನ್ನು ಹರಡಲು ಅಂತರ್ಜಾಲ ಸೇವೆಯನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇತ್ತು' ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.