ADVERTISEMENT

ದೆಹಲಿ ಚಲೋ: ರೈತ ಮುಖಂಡರೊಂದಿಗೆ ಇಂದು 4ನೇ ಸುತ್ತಿನ ಮಾತುಕತೆ

ಪಿಟಿಐ
Published 18 ಫೆಬ್ರುವರಿ 2024, 4:59 IST
Last Updated 18 ಫೆಬ್ರುವರಿ 2024, 4:59 IST
<div class="paragraphs"><p>ಪ್ರತಿಭಟನಾ ನಿರತ&nbsp;ರೈತರು</p></div>

ಪ್ರತಿಭಟನಾ ನಿರತ ರೈತರು

   

(ಚಿತ್ರ ಕೃಪೆ–ಪಿಟಿಐ) 

ಚಂಡೀಗಢ: ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಗೆ ಕಾನೂನು ಖಾತರಿ ಹಾಗೂ ಸಾಲ ಮನ್ನಾ ಸೇರಿದಂತೆ ರೈತರ ಬೇಡಿಕೆಗಳ ಕುರಿತು ಕೇಂದ್ರ ಸಚಿವರ ಸಮಿತಿಯು ಇಂದು (ಭಾನುವಾರ) ರೈತ ಮುಖಂಡರೊಂದಿಗೆ 4ನೇ ಸುತ್ತಿನ ಮಾತುಕತೆ ನಡೆಸಲಿದೆ.

ADVERTISEMENT

ಫೆಬ್ರುವರಿ 8, 12 ಮತ್ತು 15 ರಂದು ಸಚಿವರು ಮತ್ತು ರೈತ ಮುಖಂಡರ ನಡುವೆ ಮಾತುಕತೆ ನಡೆದಿವೆ. ಆದರೆ ತೀರ್ಮಾನವೊಂದಕ್ಕೆ ಬರಲು ಸಾಧ್ಯವಾಗಿರಲಿಲ್ಲ.

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಅರ್ಜುನ್ ಮುಂಡಾ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಮತ್ತು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್‌ ಅವರು ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸೇರಿದಂತೆ ರೈತ ಮುಖಂಡರನ್ನು ಇಂದು ಸಂಜೆ 6 ಗಂಟೆಗೆ ಚಂಡೀಗಢದಲ್ಲಿ ಭೇಟಿ ಮಾಡಲಿದ್ದಾರೆ.

ಸಾಲ ಮನ್ನಾ, ಎಂಎಸ್‌ಪಿಗೆ ಕಾನೂನು ಖಾತರಿ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ರೈತರಿಗೆ ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಿಸಾನ್ ಮಜ್ದೂರ್ ಮೋರ್ಚಾ ಕರೆ ನೀಡಿರುವ ‘ದೆಹಲಿ ಚಲೋ’ ಪ್ರತಿಭಟನೆ ಭಾನುವಾರ ಆರನೇ ದಿನಕ್ಕೆ ಕಾಲಿರಿಸಿದೆ.

ಶನಿವಾರ(ನಿನ್ನೆ) ಪ್ರತಿಭಟನಾಕಾರರು ಮತ್ತು ಹರಿಯಾಣ ಭದ್ರತಾ ಸಿಬ್ಬಂದಿ ನಡುವೆ ಯಾವುದೇ ಘರ್ಷಣೆ ನಡೆದ ಬಗ್ಗೆ ವರದಿಯಾಗಿಲ್ಲ. ಗಡಿಯಲ್ಲಿ ಶಾಂತತೆ ಕಾಪಾಡುವಂತೆ ರೈತ ಮುಖಂಡರು ಪ್ರತಿಭಟನಾಕಾರರಿಗೆ ಮನವಿ ಮಾಡಿದ್ದಾರೆ.

ರೈತರ ಬೇಡಿಕೆಗಳನ್ನು ಪರಿಹರಿಸಲು ಇಡೀ ದೇಶವೇ ಪ್ರಧಾನಿ ನರೇಂದ್ರ ಮೋದಿಯವರತ್ತ ನೋಡುತ್ತಿದೆ. ಕೇಂದ್ರದೊಂದಿಗಿನ ಭಾನುವಾರದ ಸಭೆಯ ನಂತರ ರೈತರಿಗೆ ಒಳ್ಳೆಯ ಸುದ್ದಿ ಸಿಗುತ್ತದೆ ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧರ್ ವಿಶ್ವಾಸ ವ್ಯಕ್ತಪಡಿಸಿದರು .

ಈಗ ಚೆಂಡು ಸರ್ಕಾರದ ಅಂಗಳದಲ್ಲಿದೆ. ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕು ಕೇಂದ್ರಕ್ಕೆ ಇದೆ ಎಂದೂ ಅವರು ಹೇಳಿದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಹರಿಯಾಣ ಸರ್ಕಾರ ಶನಿವಾರ 7 ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ ಆದೇಶವನ್ನು ಫೆಬ್ರುವರಿ 19ರವರೆಗೆ ವಿಸ್ತರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.