ನವದೆಹಲಿ: ದೆಹಲಿಯ ನೂತನ ಮುಖ್ಯಮಂತ್ರಿ ಆಯ್ಕೆಗೆ ಸಂಬಂಧಿಸಿದಂತೆ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಸೋಮವಾರ ಮುಖಂಡರ ಜೊತೆಗೆ ಪ್ರತ್ಯೇಕ ಸಭೆ ನಡೆಸಿದರು. ಮುಖ್ಯಮಂತ್ರಿ ಹುದ್ದೆಗೆ ಸಚಿವೆ ಆತಿಶಿ ಅವರ ಹೆಸರು ಮುಂಚೂಣಿಯಲ್ಲಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಭಾನುವಾರ ಪ್ರಕಟಿಸಿದ್ದ ಕೇಜ್ರಿವಾಲ್ ಅವರು, ಮಂಗಳವಾರ ಸಂಜೆ 4.30ಕ್ಕೆ ಲೆಫ್ಟಿನಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರನ್ನು ಭೇಟಿಯಾಗಲಿದ್ದಾರೆ. ಅದಕ್ಕೂ ಮುನ್ನ ತಮ್ಮ ಅಧಿಕೃತ ನಿವಾಸದಲ್ಲಿ ಎಎಪಿ ಶಾಸಕರ ಸಭೆಯನ್ನು ಕರೆದಿದ್ದು, ಅಲ್ಲಿಯೇ ಉತ್ತರಾಧಿಕಾರಿ ಹೆಸರು ಘೋಷಿಸುವ ಸಂಭವವಿದೆ.
ಪೂರ್ವಭಾವಿಯಾಗಿ ಮುಖ್ಯಮಂತ್ರಿಯವರ ಅಧಿಕೃತ ನಿವಾಸದಲ್ಲಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯ (ಪಿಎಸಿ) ಸಭೆ ಸೋಮವಾರ ನಡೆಯಿತು. ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿ ಅಲ್ಲಿ ಮುಖಂಡರ ಅಭಿಪ್ರಾಯಗಳನ್ನು ಪಡೆಯಲಾಯಿತು ಎಂದು ಸಚಿವ ಸೌರಭ್ ಭಾರದ್ವಾಜ್ ತಿಳಿಸಿದರು.
‘ಲೆಫ್ಟಿನಂಟ್ ಗವರ್ನರ್ ಭೇಟಿಗೆ ಕೇಜ್ರಿವಾಲ್ ಮಂಗಳವಾರ ಸಮಯ ಕೋರಿದ್ದಾರೆ. ಸೋಮವಾರ ಎಲ್ಲ ಮುಖಂಡರಿಂದ ಪ್ರತ್ಯೇಕವಾಗಿ ಅಭಿಪ್ರಾಯ ಸಂಗ್ರಹಿಸಿದ್ದು, ಮಂಗಳವಾರ ಶಾಸಕಾಂಗ ಸಭೆ ನಡೆಯಲಿದೆ. ಅಲ್ಲಿ ಎರಡನೇ ಸುತ್ತಿನ ಚರ್ಚೆ ನಡೆಯಲಿದೆ’ ಎಂದು ವಿವರಿಸಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ಯಾರ ಹೆಸರುಗಳು ಪ್ರಸ್ತಾಪವಾಗಿವೆ ಎಂಬ ಪ್ರಶ್ನೆಗೆ, ‘ಪ್ರತ್ಯೇಕವಾಗಿ ಭೇಟಿ ನಡೆದಿರುವ ಕಾರಣ, ಯಾರ ಆದ್ಯತೆ ಯಾರ ಪರವಾಗಿದೆ ಎಂದು ತಿಳಿದಿಲ್ಲ’ ಎಂದು ಪ್ರತಿಕ್ರಿಯಿಸಿದರು.
ಮೂಲಗಳ ಪ್ರಕಾರ, ಕೇಜ್ರಿವಾಲ್ ಅವರ ಅನುಪಸ್ಥಿತಿಯಲ್ಲಿ ಬಹುತೇಕ ಇಲಾಖೆಗಳ ಉಸ್ತುವಾರಿ ಹೊಂದಿದ್ದ ಸಚಿವೆ ಆತಿಶಿ ಹೆಸರು, ಸಂಭವನೀಯ ಮುಖ್ಯಮಂತ್ರಿ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ.
ಆತಿಶಿ ಅವರನ್ನು ಕೇಜ್ರಿವಾಲ್ ಅವರ ನಿಷ್ಠರು ಎಂದೇ ಗುರುತಿಸಲಾಗಿದೆ. ಅವರು ಶಿಕ್ಷಣ ಇಲಾಖೆಯಲ್ಲಿ ಸುಧಾರಣೆಗಳಿಗೆ ಕಾರಣರಾಗಿದ್ದಾರೆ. ಇತ್ತೀಚೆಗೆ, ಸ್ವಾತಂತ್ರ್ಯ ದಿನ ಸಮಾರಂಭದಲ್ಲಿ ಧ್ವಜಾರೋಹಣಕ್ಕೆ ಆತಿಶಿ ಹೆಸರನ್ನೇ ಕೇಜ್ರಿವಾಲ್ ಸೂಚಿಸಿದ್ದರು ಎಂಬುದು ಇದಕ್ಕೆ ಪೂರಕವಾಗಿ ಇದೆ.
‘ಕೇಜ್ರಿವಾಲ್ ಅವರ ಪತ್ನಿ ಸುನಿತಾ ಅವರನ್ನು ಉನ್ನತ ಸ್ಥಾನಕ್ಕೆ ತರುವ ಯಾವುದೇ ಸಾಧ್ಯತೆ ಇಲ್ಲ’ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಕೇಜ್ರಿವಾಲ್ ಅವರು ಸಿಸೋಡಿಯಾ ಅವರ ಜೊತೆಗೂ ಸೋಮವಾರ ಪ್ರತ್ಯೇಕವಾಗಿ ಚರ್ಚಿಸಿದರು. ರಾಜೀನಾಮೆ ತೀರ್ಮಾನ ಪ್ರಕಟಿಸುವಾಗಲೂ ‘ಜನರಿಂದ ಪ್ರಾಮಾಣಿಕತೆ ಪ್ರಮಾಣಪತ್ರ ಸಿಗುವವರೆಗೂ ನಾನು ಅಥವಾ ಸಿಸೋಡಿಯಾ ಮುಖ್ಯಮಂತ್ರಿ ಆಗುವುದಿಲ್ಲ’ ಎಂದು ಕೇಜ್ರಿವಾಲ್ ಪ್ರಕಟಿಸಿದ್ದರು.
ಸಚಿವರಾದ ಕೈಲಾಶ್ ಗೆಹಲೋತ್, ಗೋಪಾಲ್ ರಾಯ್
ದಲಿತ ಸಮುದಾಯದ ರಾಖಿ ಬಿರ್ಲಾ
ಅಲ್ಪಸಂಖ್ಯಾತ ಸಮುದಾಯದ ಇಮ್ರಾನ್ ಹುಸೇನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.