ADVERTISEMENT

BJP ಒತ್ತಡದಿಂದಾಗಿ ಬಲವಂತವಾಗಿ ಮುಖ್ಯಮಂತ್ರಿ ಮನೆ ಖಾಲಿ ಮಾಡಿಸಲಾಗಿದೆ: CM ಕಚೇರಿ

ಪಿಟಿಐ
Published 9 ಅಕ್ಟೋಬರ್ 2024, 13:18 IST
Last Updated 9 ಅಕ್ಟೋಬರ್ 2024, 13:18 IST
<div class="paragraphs"><p>ಮುಖ್ಯಮಂತ್ರಿ ನಿವಾಸ ತೊರೆದಿದ್ದ ಅರವಿಂದ ಕೇಜ್ರಿವಾಲ್ (ಕಡತ ಚಿತ್ರ)</p></div>

ಮುಖ್ಯಮಂತ್ರಿ ನಿವಾಸ ತೊರೆದಿದ್ದ ಅರವಿಂದ ಕೇಜ್ರಿವಾಲ್ (ಕಡತ ಚಿತ್ರ)

   

–ಪಿಟಿಐ ಚಿತ್ರ

ನವದೆಹಲಿ: ಬಿಜೆಪಿಯ ಆದೇಶದ ಮೇರೆಗೆ ‘ದೆಹಲಿ ಮುಖ್ಯಮಂತ್ರಿ ಅಧಿಕೃತ ನಿವಾಸ’ವನ್ನು ಖಾಲಿ ಮಾಡಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ (ಸಿಎಂಒ) ಬುಧವಾರ ಆರೋಪಿಸಿದೆ.

ADVERTISEMENT

ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಬಿಜೆಪಿಯ ಕೆಲವು ನಾಯಕರಿಗೆ ಈ ನಿವಾಸವನ್ನು ಮಂಜೂರು ಮಾಡಲು ಬಯಸಿದ್ದು, ಮುಖ್ಯಮಂತ್ರಿ ಆತಿಶಿ ಅವರ ವಸ್ತುಗಳನ್ನು ಸಿ.ಎಂ ಅಧಿಕೃತ ನಿವಾಸದಿಂದ ಹೊರಹಾಕಲಾಗಿದೆ ಎಂದು ಸಿಎಂಒ ಹೇಳಿಕೆಯಲ್ಲಿ ತಿಳಿಸಿದೆ.

ಈ ಆರೋಪಗಳಿಗೆ ಲೆಫ್ಟಿನೆಂಟ್ ಗವರ್ನರ್ ಕಚೇರಿಯಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಅರವಿಂದ ಕೇಜ್ರಿವಾಲ್ ಈ ನಿವಾಸದಲ್ಲಿದ್ದರು. ಇತ್ತೀಚೆಗಷ್ಟೇ ಅವರು ಈ ನಿವಾಸ ತೆರವುಗೊಳಿಸಿದ್ದರು. ಮುಖ್ಯಮಂತ್ರಿಯಾಗಿ ಆತಿಶಿ ಅವರು ಅಧಿಕಾರ ವಹಿಸಿಕೊಂಡ ಮೇಲೆ, ಸೋಮವಾರವಷ್ಟೇ ಮುಖ್ಯಮಂತ್ರಿಯ ಅಧಿಕೃತ ನಿವಾಸದ ಬಂಗಲೆಯನ್ನು ಪ್ರವೇಶಿಸಿದ್ದರು.

‘ಮುಖ್ಯಮಂತ್ರಿ ಆತಿಶಿ ಅವರು ಬಂಗಲೆಯಲ್ಲಿರುವ ಕ್ಯಾಂಪ್ ಕಚೇರಿಯಲ್ಲಿ ಸಭೆ ನಡೆಸಿದರು. ಆದರೆ, ನಂತರ ಅಲ್ಲಿದ್ದ ಸಿಬ್ಬಂದಿಯನ್ನು ತೆಗೆದು ಹಾಕಲಾಯಿತು. ಅಧಿಕಾರಿಗಳು ಬಿಜೆಪಿಯ ಒತ್ತಡಕ್ಕೆ ಮಣಿದು, ಶಿಷ್ಟಾಚಾರವನ್ನು ಉಲ್ಲಂಘಿಸಿ ಆತಿಶಿ ಅವರಿಗೆ ಅಧಿಕೃತ ಮುಖ್ಯಮಂತ್ರಿ ನಿವಾಸವನ್ನು ಮಂಜೂರು ಮಾಡಿಲ್ಲ’ ಎಂದು ಎಎಪಿ ಹಿರಿಯ ನಾಯಕ ಸಂಜಯ್ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೆಹಲಿಯ ವಿರೋಧ ಪಕ್ಷದ ನಾಯಕ ವಿಜೇಂದರ್ ಗುಪ್ತಾ, ಮುಖ್ಯಮಂತ್ರಿ ಬಂಗಲೆಯನ್ನು ಕಾನೂನುಬಾಹಿರವಾಗಿ ಆಕ್ರಮಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದು, ಈ ನಿವಾಸಕ್ಕೆ ಬೀಗಮುದ್ರೆಯನ್ನು ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

‘ಬಂಗಲೆಯನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿಲ್ಲ. ಕೇಜ್ರಿವಾಲ್ ಅವರ ಬಳಿ ಈ ನಿವಾಸದ ಕೀಗಳು ಇನ್ನೂ ಇವೆ’ ಎಂದು ಬಿಜೆಪಿ ನಾಯಕ ಆರೋಪ ಮಾಡಿದ್ದಾರೆ.

ಈ ಆರೋಪಗಳನ್ನು ತಳ್ಳಿಹಾಕಿದ ಸಂಜಯ್‌ ಸಿಂಗ್, ಕೇಜ್ರಿವಾಲ್‌ ಅವರು ಸಿ.ಎಂ ಅಧಿಕೃತ ನಿವಾಸವನ್ನು ಖಾಲಿ ಮಾಡಿರುವುದಕ್ಕೆ ದಾಖಲೆಗಳಿದ್ದರೂ ಬಿಜೆಪಿಯು ಈ ವಿಷಯದಲ್ಲಿ ಸುಳ್ಳು ಹೇಳುತ್ತಿದೆ. ಎಎಪಿಯನ್ನು ದುರ್ಬಲಗೊಳಿಸುವ ಮತ್ತು ಪಕ್ಷವನ್ನು ಒಡೆಯುವ ತಂತ್ರಗಳು ವಿಫಲವಾಗಿರುವುದರಿಂದ ದೆಹಲಿಯಲ್ಲಿ ಗೊಂದಲವನ್ನು ಸೃಷ್ಟಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲ್ಲಲು ಸಾಧ್ಯವಾಗದ ಕಾರಣ, ಅದು ಈಗ ದೆಹಲಿ ಮುಖ್ಯಮಂತ್ರಿಯ ಅಧಿಕೃತ ಬಂಗಲೆಯನ್ನು ಆಕ್ರಮಿಸಲು, ಕಬಳಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.