ADVERTISEMENT

ಪಂಜಾಬ್‌ ಗದ್ದುಗೆಯತ್ತ ಕೇಜ್ರಿವಾಲ್‌ ದೃಷ್ಟಿ; ಕಾಂಗ್ರೆಸ್‌ನಲ್ಲಿ ಒಳಜಗಳ

ಅಕಾಲಿದಳದ ವಿಶ್ವಾಸದ ಕೊರತೆ...

ಸಿದ್ದಯ್ಯ ಹಿರೇಮಠ
Published 1 ಜುಲೈ 2021, 9:53 IST
Last Updated 1 ಜುಲೈ 2021, 9:53 IST
ಅರವಿಂದ್‌ ಕೇಜ್ರಿವಾಲ್‌
ಅರವಿಂದ್‌ ಕೇಜ್ರಿವಾಲ್‌   

ನವದೆಹಲಿ: ಪಂಜಾಬ್‌ನ ವಿಧಾನಸಭೆಗೆ 2017ರಲ್ಲಿ ನಡೆದ ಚುನಾವಣೆಯಲ್ಲಿ ಅಪಾರ ನಿರೀಕ್ಷೆಯ ನಡುವೆಯೂ ಆಮ್‌ ಆದ್ಮಿ ಪಕ್ಷಕ್ಕೆ ಮರೀಚಿಕೆಯಾಗಿ ಪರಿಣಮಿಸಿದ್ದ ಅಧಿಕಾರದ ಗದ್ದುಗೆ, ಒಂದರ್ಥದಲ್ಲಿ ‘ಕೈಗೆ ಬಂದ ತುತ್ತು ಬಾಯಿ ತಲುಪಲಿಲ್ಲ’ ಎಂದು ಪರಿತಪಿಸಲು ಕಾರಣವಾಗಿತ್ತು.

ಸತತ 10 ವರ್ಷ ಮುಖ್ಯಮಂತ್ರಿಯಾಗಿದ್ದ ಶಿರೋಮಣಿ ಅಕಾಲಿ ದಳದ ಪ್ರಕಾಶ್ ಸಿಂಗ್‌ ಬಾದಲ್‌ ಅವರ ದುರಾಡಳಿತ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ನಿಯಂತ್ರಣಕ್ಕೆ ಬಾರದ ಮಾದಕ ವಸ್ತುಗಳ ಮಾರಾಟದಿಂದ ಬೇಸತ್ತ ಜನ ಸಹಜವಾಗಿಯೇ ಬದಲಾವಣೆ ಬಯಸಿದ್ದರು.

ವ್ಯಾಪಕವಾಗಿ ಬೀಸಿದ್ದ ಬದಲಾವಣೆಯ ಗಾಳಿ ‘ಆಮ್‌ ಆದ್ಮಿ ಪಕ್ಷಕ್ಕೆ ವರದಾನವಾಗಲಿದೆ’ ಎಂದೇ ಭಾವಿಸಲಾಗಿತ್ತು. ಪಕ್ಕದ ದೆಹಲಿಯಲ್ಲಿ ಉತ್ತಮ ಆಡಳಿತದಿಂದ ಹೆಸರು ಮಾಡುತ್ತಿದ್ದ ಅರವಿಂದ್‌ ಕೇಜ್ರಿವಾಲ್‌ ಪಂಜಾಬ್‌ನ ಮುಖ್ಯಮಂತ್ರಿ ಆಗಲಿದ್ದಾರೆ. ದೆಹಲಿಯ ಜವಾಬ್ದಾರಿಯನ್ನು ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಕೈಗೆ ವಹಿಸಲಿದ್ದಾರೆ ಎಂಬ ವದಂತಿಯೂ ಹಬ್ಬಿತ್ತು. ಕೇಜ್ರಿವಾಲ್‌ ನೇತೃತ್ವದ ಪಕ್ಷದತ್ತ ಯುವ ಸಮೂಹ ವಾಲಿತ್ತಾದರೂ, ಅಧಿಕಾರಕ್ಕೆ ಅಗತ್ಯವಿರುವ ಸ್ಥಾನಗಳನ್ನು ದಕ್ಕಿಸಿಕೊಳ್ಳುವಷ್ಟರ ಮಟ್ಟಿಗೆ ನೆರವಿಗೆ ಬರಲಿಲ್ಲ. ಅಂತೆಯೇ ಅಧಿಕಾರದ ಗದ್ದುಗೆಯು ಆಮ್‌ ಆದ್ಮಿ ಪಕ್ಷದ ಕೈತಪ್ಪಿ ಕಾಂಗ್ರೆಸ್‌ ಪಾಲಾಯಿತು.

ADVERTISEMENT

117 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 77ರಲ್ಲಿ ಜಯಗಳಿಸಿ ದಶಕದ ನಂತರ ಮತ್ತೆ ಪಂಜಾಬ್‌ನ ಗದ್ದುಗೆ ಹಿಡಿಯಿತು. ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರ ವರ್ಚಸ್ಸು ಬಿಜೆಪಿ ಹಾಗೂ ಅಕಾಲಿದಳದ ಮೈತ್ರಿಕೂಟವನ್ನು ಮೂಲೆಗೆ ತಳ್ಳಿದರೆ, ಆಮ್‌ ಆದ್ಮಿ ಪಕ್ಷದ ಜನಪ್ರಿಯತೆಯು ಅಧಿಕಾರ ದಕ್ಕಿಸಿಕೊಳ್ಳುವಷ್ಟರ ಮಟ್ಟಿಗೆ ಉಪಯೋಗಕ್ಕೂ ಬರಲಿಲ್ಲ. ಹಾಗಾಗಿ, ಪಕ್ಷ ಕೇವಲ 20 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಮತ್ತೆ ದೆಹಲಿ ಗೆಲುವು: ಅದೇ ವೇಳೆ ಪಂಜಾಬ್‌ ಮಾತ್ರವಲ್ಲದೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಗೋವಾದಲ್ಲೂ ಗೆಲುವು ದಕ್ಕದೇ ತೀವ್ರ ನಿರಾಸೆ ಉಂಟಾಗಿದ್ದರಿಂದ ಅನಗತ್ಯ ಹೇಳಿಕೆ, ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗುವುದನ್ನು ಬಿಟ್ಟ ಕೇಜ್ರಿವಾಲ್‌ ದೆಹಲಿಯ ಅಭಿವೃದ್ಧಿಯತ್ತ ಗಮನ ಹರಿಸಿದರು.

2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲೂ ಪಕ್ಷಕ್ಕೆ ಗೆಲುವು ದೊರೆಯದ್ದರಿಂದ ವಿಚಲಿತರಾಗದೇ, 2020ರ ಆರಂಭಕ್ಕೆ ನಡೆಯಲಿದ್ದ ದೆಹಲಿಯ ವಿಧಾನಸಭೆ ಚುನಾವಣೆಯ ಯಶಸ್ಸಿಗಾಗಿ ಅಣಿಯಾದರು.

ಉಚಿತ ಕುಡಿಯುವ ನೀರು ಪೂರೈಕೆ, ಗೃಹಬಳಕೆಯ 200 ಯೂನಿಟ್‌ನಷ್ಟು ಉಚಿತ ವಿದ್ಯುತ್‌ ನೀಡುವುದಾಗಿ ಘೋಷಿಸಿದರು. ವಿದ್ಯುತ್‌ ಉಳಿತಾಯದ ಸುಲಭೋಪಾಯ ಕಂಡುಕೊಂಡ ಅವರು, 200ಕ್ಕಿಂತ ಒಂದು ಯೂನಿಟ್‌ ವಿದ್ಯುತ್‌ ಅನ್ನು ಹೆಚ್ಚುವರಿಯಾಗಿ ಬಳಸಿದರೆ ಎಲ್ಲಕ್ಕೂ ಶುಲ್ಕ ಭರಿಸಬೇಕು ಎಂಬ ಷರತ್ತು ವಿಧಿಸಿ ಯಶಸ್ವಿಯಾದರು. ದೆಹಲಿ ಸಾರಿಗೆಯಲ್ಲಿ ಎಲ್ಲ ಮಹಿಳೆಯರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದರು. ದೆಹಲಿ ವಿಧಾನಸಭೆಯ 70 ಕ್ಷೇತ್ರಗಳ ಪೈಕಿ 62ರಲ್ಲಿ ಗೆದ್ದು ಮತ್ತೆ ರಾಷ್ಟ್ರ ರಾಜಧಾನಿಯ ಮುಖ್ಯಮಂತ್ರಿಯಾದರು.

ಸಿಖ್‌ ಮುಖ್ಯಮಂತ್ರಿ: ಪಂಜಾಬ್‌ ಚುನಾವಣೆ ಮುಗಿದು ನಾಲ್ಕೂವರೆ ವರ್ಷಗಳು ಕಳೆದಿವೆ. ಡಿಸೆಂಬರ್‌ ಅಂತ್ಯದ ವೇಳೆಗೆ ಪಂಜಾಬ್‌ ಒಳಗೊಂಡಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಘೋಷಣೆಯಾಗಲಿದೆ. ಅಲ್ಲೆಲ್ಲ ಹೊಸ ವರ್ಷಾರಂಭಕ್ಕೇ ಹೊಸ ಸರ್ಕಾರ ಪ್ರತಿಷ್ಠಾಪನೆ ಆಗಲಿದೆ. ಸಿಖ್ಖರ ನಾಡಾದ ಪಂಜಾಬಿನ ಗದ್ದುಗೆ ಮೇಲೆ ಇದೀಗ ಮತ್ತೆ ದೆಹಲಿಯ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ದೃಷ್ಟಿ ನೆಟ್ಟಿದ್ದಾರೆ.

ನದಿ ನೀರು ಹಂಚಿಕೆಯ ಹಳೆಯ ವಿವಾದವೊಂದಕ್ಕೆ ಸಂಬಂಧಿಸಿದಂತೆ ಪಂಜಾಬಿಗರ ವಿರುದ್ಧ ಹೇಳಿಕೆ ನೀಡಿ ಅಲ್ಲಿನವರ ವಿರೋಧ ಎದುರಿಸಿದ್ದ ಕೇಜ್ರಿವಾಲ್‌ ಈ ಬಾರಿ ಅಂಥ ಹೇಳಿಕೆಗಳಿಂದ ದೂರ ಉಳಿಯಲು ನಿಶ್ಚಯಿಸಿದ್ದಾರೆ. ಮೇಲಾಗಿ, ‘ಸಿಖ್ಖರನ್ನು ಹೊರತುಪಡಿಸಿ ಬೇರೊಬ್ಬರನ್ನು ಅಲ್ಲಿನ ಜನ ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಲು ಬಯಸುವುದಿಲ್ಲ’ ಎಂಬ ಸತ್ಯವನ್ನು ಅರಿತಿದ್ದಾರೆ.

ಅಂತೆಯೇ ಚುನಾವಣೆಗೆ ಸಾಕಷ್ಟು ಮುಂಚಿತವಾಗಿಯೇ ಪಂಜಾಬ್‌ ಪ್ರವಾಸ ಆರಂಭಿಸಿರುವ ಅವರು, ಇತ್ತೀಚೆಗಷ್ಟೇ ಅಮೃತಸರಕ್ಕೆ ಭೇಟಿ ನೀಡಿದ ಸಂದರ್ಭ, ‘ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸಿಖ್ಖರೇ ಮುಖ್ಯಮಂತ್ರಿ ಆಗಲಿದ್ದಾರೆ’ ಎಂದು ಸಾರಿದ್ದಾರೆ.

ಉಚಿತ ವಿದ್ಯುತ್‌: ಪಂಜಾಬ್‌ನ ಆಡಳಿತಾರೂಢ ಕಾಂಗ್ರೆಸ್‌ ಈಗ ಒಡೆದ ಮನೆಯಂತಾಗಿದೆ. ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಹಾಗೂ ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ನವಜ್ಯೋತ್‌ ಸಿಂಗ್‌ ಸಿಧು ನಡುವಿನ ಜಗಳ ಬೀದಿಗೆ ಬಿದ್ದಿದೆ.

ಇನ್ನೊಂದೆಡೆ, ಎನ್‌ಡಿಎ ಮೈತ್ರಿಕೂಟದಿಂದ ಹೊರ ಬಂದಿರುವ ಶಿರೋಮಣಿ ಅಕಾಲಿ ದಳವು, ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷದೊಂದಿಗೆ ಚುನಾವಣೆ ಎದುರಿಸುವುದಾಗಿ ಹೇಳಿಯಾಗಿದೆ. ಸದ್ಯದ ಸ್ಥಿತಿಯಲ್ಲಿ ಅಕಾಲಿ ದಳ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸದ ಕೊರತೆಯಿಂದ ಬಳಲುತ್ತಿದೆ.

ಬಾದಲ್‌ ಗುಂಪಿನ ಸಖ್ಯ ತೊರೆದಿರುವ ಬಿಜೆಪಿ ಅಲ್ಲಿ ಆಟಕ್ಕೂ ಇಲ್ಲ ಲೆಕ್ಕಕ್ಕೂ ಇಲ್ಲ ಎಂಬಂತಿದೆ.

‘ಈ ಪರಿಸ್ಥಿತಿಯ ಲಾಭ ದೊರೆಯುವುದು ಕೇವಲ ಆಮ್‌ ಆದ್ಮಿ ಪಕ್ಷಕ್ಕೆ ಮಾತ್ರ’ ಅಂತ ಕೇಜ್ರಿವಾಲ್‌ ಅವರಿಗೆ ಅನ್ನಿಸಿದೆ.

ಕಳೆದ ವಾರ, ‘ಸಿಖ್‌ ಮುಖ್ಯಮಂತ್ರಿ’ ಘೋಷಣೆ ಮಾಡಿ ಚುನಾವಣಾ ಅಖಾಡಕ್ಕೆ ನುಗ್ಗಿದ್ದ ಅವರು, ಎರಡು ದಿನಗಳ ಹಿಂದೆ ಚಂಡೀಗಡದಲ್ಲಿ ಚುನಾವಣಾ ರಣತಂತ್ರದ ಭಾಗವಾಗಿ, ‘ಗೆದ್ದರೆ ಇಡೀ ರಾಜ್ಯಕ್ಕೆ 300 ಯೂನಿಟ್‌ ಉಚಿತ ವಿದ್ಯುತ್‌ ನೀಡಲಾಗುವುದು’ ಎಂದು ಘೋಷಿಸಿದ್ದಾರೆ.

‘ಪ್ರತಿ ಮನೆಯ ಜವಾಬ್ದಾರಿ ಹೊತ್ತ ಮಹಿಳೆಯರು ವಿದ್ಯುತ್‌ ಬಿಲ್‌ ಕಟ್ಟಲು ಎಷ್ಟು ಕಷ್ಟಪಡುತ್ತಾರೆ ಎಂಬುದು ನನಗೆ ಗೊತ್ತು. ದೆಹಲಿಯಲ್ಲೂ ಉಚಿತ ವಿದ್ಯುತ್‌ ನೀಡುವ ಮೂಲಕ ನಾವು ಅದೆಷ್ಟೋ ಮಹಿಳೆಯರ ಮುಖದಲ್ಲಿ ಮಂದಹಾಸ ಕಂಡಿದ್ದೇವೆ. ಮನೆಯ ನಿರ್ವಹಣೆಯಲ್ಲಿ ಗಂಡಸರ ಪಾತ್ರ ಎಷ್ಟು ಎಂಬುದನ್ನು ನಾನು ಬಲ್ಲೆ. ಸಾವಿರ ಅಥವಾ ಏಳೆಂಟು ನೂರು ರೂಪಾಯಿ ಹೊಂದಿಸಿ ಪ್ರತಿ ತಿಂಗಳೂ ವಿದ್ಯುತ್‌ ಬಿಲ್‌ ಕಟ್ಟುವ ಹೆಂಗಸರು, ಅದನ್ನೇ ಉಳಿತಾಯ ಯೋಜನೆಗಾಗಿ ಬಳಸಿದಲ್ಲಿ ಸಂಸಾರ ಸಾಗಿಸುವುದು ಇನ್ನೂ ಸುಲಭವಾಗಲಿದೆ’ ಎಂದು ನೇರವಾಗಿ ಹೆಂಗಳೆಯರ ಮನಸ್ಸಿಗೇ ನಾಟುವಂತ ಹೇಳಿಕೆ ನೀಡಿದ್ದಾರೆ.

‘ಆಮ್‌ ಆದ್ಮಿ ಪಕ್ಷದ ಸರ್ಕಾರವು ವಾಣಿಜ್ಯ ಉದ್ದೇಶ ಮತ್ತು ಕೈಗಾರಿಕೆ ಉದ್ದೇಶಕ್ಕೆ ಬಳಸುವ ವಿದ್ಯುತ್‌ ದರವನ್ನೂ ಪರಿಷ್ಕರಿಸುವ ಗೋಜಿಗೆ ಹೋಗುವುದಿಲ್ಲ. ಇಡೀ ರಾಜ್ಯಕ್ಕೆ ದಿನದ 24 ಗಂಟೆಗಳ ಕಾಲ ಸತತ ವಿದ್ಯುತ್‌ ಒದಗಿಸುವುದು ನಮ್ಮ ಗುರಿ. ನೀರಾವರಿ ಅವಲಂಬಿಸಿರುವ ರೈತರಿಗೆ ಸತತ ವಿದ್ಯುತ್‌ ಒದಗಿಸಿದಲ್ಲಿ, ಪರೋಕ್ಷವಾಗಿ ಎಲ್ಲರಿಗೂ ಲಾಭ’ ಎಂದೂ ಹೇಳಿರುವ ಅವರು, ವಿವಿಧ ವರ್ಗಗಳ ಜನರ ಮನಸ್ಸು ಗೆಲ್ಲುವ ಪ್ರಯತ್ನ ಮಾಡಿದ್ದಾರೆ.

‘ದೆಹಲಿಯಲ್ಲಿ ಮಾಡಿ ತೋರಿಸಿದವರು ಪಂಜಾಬ್‌ನಲ್ಲಿ ಮಾಡುವುದಿಲ್ಲವೇ’ ಎಂದೂ ಅಲ್ಲಿನ ಜನ ವಿಶ್ವಾಸದೊಂದಿಗೆ ಮಾತನಾಡಿಕೊಳ್ಳುವುದು ಈಗ ಕೇಳಿಬರುತ್ತಿದೆ.

ಇತ್ತೀಚೆಗಷ್ಟೇ ಗುಜರಾತ್‌ನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿ ಕೆಲವು ಸ್ಥಾನಗಳನ್ನು ಗೆದ್ದಿರುವ ಕೇಜ್ರಿವಾಲ್‌ ಆತ್ಮವಿಶ್ವಾಸದ ಬುಗ್ಗೆಯಾಗಿದ್ದಾರೆ. ಪಂಜಾಬ್‌ ನಂತರ ಗುಜರಾತ್‌ ವಿಧಾನಸಭೆಗೆ 2022ರ ಅಂತ್ಯಕ್ಕೆ ನಡೆಯುವ ಚುನಾವಣೆಯಲ್ಲೂ ಒಂದು ಕೈ ನೋಡುವುದಕ್ಕೆ ಸನ್ನದ್ಧರಾಗುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.