ADVERTISEMENT

ಎಎಪಿ ಶಾಸಕರಿಗೆ ಬಿಜೆಪಿ ಆಮಿಷ ಒಡ್ಡಿದ ₹ 800 ಕೋಟಿಯ ಮೂಲವೇನು? –ಕೇಜ್ರಿವಾಲ್

ಪಿಟಿಐ
Published 25 ಆಗಸ್ಟ್ 2022, 14:09 IST
Last Updated 25 ಆಗಸ್ಟ್ 2022, 14:09 IST
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್    

ನವದೆಹಲಿ: ಎಎಪಿ ತೊರೆದು ಬಿಜೆಪಿಪಕ್ಷ ಸೇರಿದರೆ ತಲಾ ₹ 20 ಕೋಟಿಯಂತೆ, ₹ 800 ಕೋಟಿ ನೀಡುವುದಾಗಿ ಆಮ್‌ ಆದ್ಮಿ ಪಕ್ಷದ (ಎಎಪಿ) 40 ಶಾಸಕರಿಗೆ ಆಮಿಷ ಒಡ್ಡಲಾಗಿದೆ. ಈ ಹಣದ ಮೂಲ ಯಾವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ಎಎಪಿ ಮುಖ್ಯಸ್ಥರೂ ಆಗಿರುವ ಕೇಜ್ರಿವಾಲ್‌,ಪಕ್ಷದ ಶಾಸಕರದೊಂದಿಗೆ ತಮ್ಮ ನಿವಾಸದಲ್ಲಿ ಗುರುವಾರ ಸಭೆ ನಡೆಸಿದರು. ನಂತರ ಎಲ್ಲರ ಜೊತೆ ರಾಜ್‌ಘಾಟ್‌ಗೆ ತೆರಳಿ 'ಆಪರೇಷನ್ ಕಮಲ' ವಿಫಲವಾಗಲಿ ಎಂದು ಪ್ರಾರ್ಥಿಸಿದರು.

ಬಳಿಕಮಾಧ್ಯಮದವರೊಂದಿಗೆ ಮಾತನಾಡಿದ ಅವರು,'ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರ ಮನೆಯ ನೆಲಹಾಸು ಮತ್ತು ಗೋಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದರೂ, ದಾಖಲೆ ಇಲ್ಲದ ಒಂದೇಒಂದು ರೂಪಾಯಿ ಸಿಬಿಐ ಅಧಿಕಾರಿಗಳಿಗೆ ಸಿಕ್ಕಿಲ್ಲ. ಸಿಬಿಐ ದಾಳಿಯ ಒಂದು ದಿನದ ಬಳಿಕ ಸಿಸೋಡಿಯಾ ಅವರನ್ನು ಸಂಪರ್ಕಿಸಿರುವ ಬಿಜೆಪಿ, ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಆಮಿಷ ಒಡ್ಡಿದೆ. ಎಲ್ಲ ಪ್ರಕರಣಗಳನ್ನು ಕೈಬಿಡುವುದಾಗಿ ಹೇಳಿದೆ. ಆದರೆ, ಸಿಎಂ ಸ್ಥಾನದ ದುರಾಸೆ ಹೊಂದಿರದ ಸಿಸೋಡಿಯಾ ಅವರಂಥವರು ಜೊತೆಗಿರುವುದು ನನ್ನ ಅದೃಷ್ಟ' ಎಂದು ಹೇಳಿದ್ದಾರೆ.

ಜನರು 'ಅತ್ಯಂತ ಪ್ರಮಾಣಿಕ' ಸರ್ಕಾರವನ್ನು ದೆಹಲಿಯಲ್ಲಿ ಆಯ್ಕೆ ಮಾಡಿದ್ದಾರೆ. ಅವರಿಗೆ ದ್ರೋಹ ಬಗೆಯುವುದಿಲ್ಲ ಎಂದೂ ಭರವಸೆ ನೀಡಿದ್ದಾರೆ.

ಶಾಸಕರಾದ ಅಜಯ್ ದತ್, ಸಂಜೀವ್ ಜಾ, ಸೋಮನಾಥ ಭಾರತಿ ಮತ್ತು ಕುಲದೀಪ್ ಅವರನ್ನು ಬಿಜೆಪಿ ನಾಯಕರು ಸಂಪರ್ಕಿಸಿದ್ದಾರೆ ಎಂದು ಎಎಪಿಯ ರಾಷ್ಟ್ರೀಯ ವಕ್ತಾರ ಹಾಗೂ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಆರೋಪಿಸಿದ್ದರು. ಅಷ್ಟಲ್ಲದೆ,ಬಿಜೆಪಿಗೆ ಸೇರಿದರೆ ತಲಾ ₹ 20 ಕೋಟಿ ಮತ್ತು ಇತರೆ ಶಾಸಕರನ್ನು ಕರೆತಂದರೆ ₹ 25 ಕೋಟಿ ನೀಡುವುದಾಗಿ ಆಮಿಷ ಒಡ್ಡಲಾಗಿದೆ ಎಂದೂ ದೂರಿದ್ದರು.

ಸಭೆಗೆ ಶಾಸಕರು ಗೈರು; ಎಎಪಿ ಸ್ಪಷ್ಟನೆ
ಬಿಜೆಪಿ ಆಮಿಷದ ಕುರಿತು ಎಎಪಿಯ ಎಲ್ಲ ಶಾಸಕರೊಂದಿಗೆ ಚರ್ಚಿಸಲುಕೇಜ್ರಿವಾಲ್ ಅವರು ತಮ್ಮ ನಿವಾಸದಲ್ಲಿ ಇಂದು (ಗುರುವಾರ) ಸಭೆ ನಡೆಸಿದರು. ಸಭೆಗೆ 8 ಶಾಸಕರು ಹಾಜರಾಗಿರಲಿಲ್ಲ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಎಎಪಿ ನಾಯಕ ಸೌರಭ್‌ ಭಾರದ್ವಾಜ್‌, ಪಕ್ಷದ 62 ಶಾಸಕರ ‍ಪೈಕಿ 54 ಮಂದಿ ಸಭೆಗೆ ಹಾಜರಾಗಿದ್ದರು. ದೆಹಲಿಯಿಂದ ಹೊರಗಿರುವ ಏಳು ಮಂದಿ ಮತ್ತು ಜೈಲಿನಲ್ಲಿರುವ ಸಚಿವ ಸತ್ಯೇಂದ್ರ ಜೈನ್‌ ಗೈರಾಗಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.