ನವದೆಹಲಿ: ಚರಂಡಿಗಳ ಹೂಳೆತ್ತುವ ಕಾರ್ಯ ಪೂರ್ಣಗೊಳಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಲೆಫ್ಟಿನೆಂಟ್ ಗವರ್ನರ್ ಕಚೇರಿ ಎದುರು ಪ್ರತಿಭಟನೆ ನಡೆಸಲು ಆಮ್ ಆದ್ಮಿ ಪಕ್ಷ (ಎಎಪಿ) ಮುಂದಾಗಿದೆ.
ದೆಹಲಿಯ ಓಲ್ಡ್ ರಾಜೇಂದ್ರ ನಗರದಲ್ಲಿರುವ ಕೋಚಿಂಗ್ ಸೆಂಟರ್ ದುರಂತ ವರದಿಯಾದ ಬೆನ್ನಲ್ಲೇ ಎಎಪಿ ಈ ನಿರ್ಧಾರ ಮಾಡಿದೆ.
'ಎಎಪಿ ಶಾಸಕರು ಮತ್ತು ಕೌನ್ಸಿಲರ್‌ಗಳೂ ಲೆಫ್ಟಿನೆಂಟ್ ಗವರ್ನರ್ ಕಚೇರಿ ಎದುರು ಪ್ರತಿಭಟನೆ ನಡೆಸಲಿದ್ದೇವೆ. ದೆಹಲಿ ಮಹಾನಗರ ಪಾಲಿಕೆ ಆಯುಕ್ತರನ್ನು ಅಮಾನತು ಮಾಡಬೇಕು ಮತ್ತು ಚರಂಡಿ ಹೂಳೆತ್ತುವ ಕಾರ್ಯ ಪೂರ್ಣಗೊಳಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಒತ್ತಾಯವಾಗಿದೆ' ಎಂದು ಪಕ್ಷ ಹೇಳಿದೆ.
ಕೋಚಿಂಗ್ ಸೆಂಟರ್ ದುರಂತವು ದೆಹಲಿಯಲ್ಲಿ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಎಎಪಿ ಸರ್ಕಾರ ಮತ್ತು ಬಿಜೆಪಿ ಪರಸ್ಪರ ಆರೋಪ ಮಾಡುತ್ತಿವೆ.
ಶನಿವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ರಾಜೇಂದ್ರ ನಗರದಲ್ಲಿರುವ 'ರಾವ್ಸ್ ಐಎಎಸ್ ಸ್ಟಡಿ ಸರ್ಕಲ್' ಕಟ್ಟಡದ ನೆಲಮಹಡಿಗೆ ನೀರು ನುಗ್ಗಿತ್ತು. ಈ ವೇಳೆ ಒಳಗಿದ್ದ ಮೂವರು ವಿದ್ಯಾರ್ಥಿಗಳು ಹೊರಬರಲಾರದೆ ಮೃತಪಟ್ಟಿದ್ದರು.
ಪ್ರಕರಣ ಸಂಬಂಧ ಇದುವರೆಗೆ ಒಟ್ಟು 7 ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಕೋಚಿಂಗ್ ಸೆಂಟರ್ ಮಾಲೀಕ ಹಾಗೂ ನಿರ್ವಾಹಕ, ನೆಲಮಹಡಿ ಮಾಲೀಕ ಬಂಧಿತರ ಪಟ್ಟಿಯಲ್ಲಿದ್ದಾರೆ.
ದುರಂತದ ಬೆನ್ನಲ್ಲೇ 13 ಅಕ್ರಮ ಕೋಚಿಂಗ್ ಕೇಂದ್ರಗಳಿಗೆ ಪಾಲಿಕೆ ಬೀಗ ಹಾಕಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.