ADVERTISEMENT

ನೀರು ನುಗ್ಗಿ 3 IAS ಆಕಾಂಕ್ಷಿಗಳು ಮೃತಪಟ್ಟ ಪ್ರಕರಣ: ಐವರ ಬಂಧನ; ತನಿಖೆಗೆ ಸಮಿತಿ

ಕೋಚಿಂಗ್‌ ಸೆಂಟರ್‌ ನೆಲಮಾಳಿಗೆಗೆ ನೀರು ನುಗ್ಗಿ 3 ಐಎಎಸ್‌ ಆಕಾಂಕ್ಷಿಗಳು ಮೃತಪಟ್ಟ ಪ್ರಕರಣ

​ಪ್ರಜಾವಾಣಿ ವಾರ್ತೆ
ಪಿಟಿಐ
Published 29 ಜುಲೈ 2024, 23:45 IST
Last Updated 29 ಜುಲೈ 2024, 23:45 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಕೋಚಿಂಗ್‌ ಸೆಂಟರ್‌ನ ನೆಲಮಾಳಿಗೆಗೆ ಮಳೆನೀರು ನುಗ್ಗಿ ಮೂವರು ಐಎಎಸ್‌ ಆಕಾಂಕ್ಷಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸೋಮವಾರ ಐವರನ್ನು ಬಂಧಿಸಿದ್ದಾರೆ. ಘಟನೆ ಬಗ್ಗೆ ಸಮಗ್ರ ತನಿಖೆಗೆ ಗೃಹ ಸಚಿವಾಲಯವು ಸಮಿತಿ ನೇಮಕ ಮಾಡಿದೆ. 

ಇಲ್ಲಿನ ಹಳೆಯ ರಾಜಿಂದರ್‌ ನಗರದಲ್ಲಿರುವ ‘ರಾವ್ಸ್‌ ಐಎಎಸ್‌ ಸ್ಟಡಿ ಸರ್ಕಲ್‌’ನ ತಳಮಹಡಿಗೆ ಶನಿವಾರ ಸಂಜೆ ನೀರು ನುಗ್ಗಿದ ಪರಿಣಾಮ ಅವಘಡ ಸಂಭವಿಸಿತ್ತು. ಕೋಚಿಂಗ್‌ ಸೆಂಟರ್‌ನ ಮಾಲೀಕ ಹಾಗೂ ನಿರ್ವಾಹಕನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ ಏಳಕ್ಕೇರಿದೆ. ಬಂಧಿತರನ್ನು ಆಗಸ್ಟ್‌ 12ರವರೆಗೆ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ADVERTISEMENT

‘ಅಕ್ರಮ’ವಾಗಿ ನಡೆಸುತ್ತಿದ್ದ ಕೋಚಿಂಗ್‌ ಸೆಂಟರ್‌ಗಳ ಮೇಲೆ ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಕ್ರಮ ಕೈಗೊಂಡಿದ್ದು, ಇಂತಹ 13 ಸೆಂಟರ್‌ಗಳಿಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.

ಸಮಿತಿ ರಚನೆ:

ತನಿಖೆಗೆ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿಯೊಬ್ಬರ ನೇತೃತ್ವದ ಸಮಿತಿ ರಚಿಸಲಾಗಿದೆ. ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ, ದೆಹಲಿ ಗೃಹ ಸಚಿವಾಲಯದ ಮುಖ್ಯ ಕಾರ್ಯದರ್ಶಿ, ದೆಹಲಿ ಪೊಲೀಸ್‌ ವಿಶೇಷ ಆಯಕ್ತರು ಮತ್ತು ಇತರ ಐವರು ಸಲಹೆಗಾರರು ಸಮಿತಿಯಲ್ಲಿ ಇದ್ದಾರೆ.

‘ಘಟನೆಗೆ ಏನು ಕಾರಣ ಎಂಬುದನ್ನು ಪತ್ತೆಹಚ್ಚುವುದು, ತಪ್ಪಿತಸ್ಥರನ್ನು ಗುರುತಿಸುವುದು, ನೀತಿಗಳಲ್ಲಿ ಬದಲಾವಣೆಗೆ ಶಿಫಾರಸು ಮಾಡುವ ಹೊಣೆಯನ್ನು ಸಮಿತಿಗೆ ವಹಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

ಘಟನೆಗೆ ಸಂಬಂಧಿಸಿದಂತೆ ಎಎಪಿ ಮತ್ತು ಬಿಜೆಪಿ ನಾಯಕರ ನಡುವಣ ವಾಕ್ಸಮರ ಸೋಮವಾರವೂ ಮುಂದುವರಿದಿದೆ. ದುರಂತದ ಕುರಿತ ಮ್ಯಾಜಿಸ್ಟ್ರೇಟ್ ತನಿಖಾ ವರದಿಯನ್ನು ಮುಖ್ಯ ಕಾರ್ಯದರ್ಶಿಯವರು ಸಲ್ಲಿಸದೇ ಇರುವುದಕ್ಕೆ ದೆಹಲಿ ಕಂದಾಯ ಸಚಿವೆ ಆತಿಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಕೋಚಿಂಗ್‌ ಸೆಂಟರ್‌ನ ಸುತ್ತಮುತ್ತಲಿನ ಪ್ರದೇಶಗಳ ಚರಂಡಿಗಳಲ್ಲಿನ ಹೂಳು ತೆಗೆಯುವ ಕೆಲಸದ ವಸ್ತುಸ್ಥಿತಿಯ ಬಗ್ಗೆ ವರದಿ ನೀಡುವಂತೆ ದೆಹಲಿ ಪೊಲೀಸರು ಎಂಸಿಡಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ಚರಂಡಿಗಳ ಹೂಳೆತ್ತುವ ಕೆಲಸ ಮತ್ತು ರಾವ್ಸ್‌ ಐಎಎಸ್‌ ಸ್ಟಡಿ ಸರ್ಕಲ್‌ ಸಂಸ್ಥೆಯ ಪರವಾನಗಿ, ಕಟ್ಟಡ ಪೂರ್ಣಗೊಂಡದ್ದಕ್ಕೆ ಕೊಡುವ ಪ್ರಮಾಣಪತ್ರ ಮತ್ತು ಸ್ವಾಧೀನ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಪೊಲೀಸರು ಎಂಸಿಡಿ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.

ಎಂಜಿನಿಯರ್‌ಗಳ ಅಮಾನತು:

ಘಟನೆಯಿಂದಾಗಿ ಟೀಕೆಗೆ ಗುರಿಯಾಗಿರುವ ಎಂಸಿಡಿ, ಕರ್ತವ್ಯಲೋಪದ ಆರೋಪದಲ್ಲಿ ಕಿರಿಯ ಎಂಜಿನಿಯರ್‌ ಮತ್ತು ಸಹಾಯಕ ಎಂಜಿನಿಯರ್‌ವೊಬ್ಬರನ್ನು ಅಮಾನತು ಮಾಡಿದೆ. ಈ ಇಬ್ಬರು ಅಧಿಕಾರಿಗಳು ಪಾಲಿಕೆಯ ಕರೋಲ್‌ ಬಾಗ್‌ ವಲಯದ ನಿರ್ವಹಣಾ ವಿಭಾಗಕ್ಕೆ ಸೇರಿದವರು. 

‘ಅಗ್ನಿ ದುರಂತ ವ್ಯವಸ್ಥೆಗೆ ಸಂಬಂಧಿಸಿದಂತೆ ಕಟ್ಟಡದಲ್ಲಿ ಎಲ್ಲವೂ ನಿಯಮಾನುಸಾರವೇ ಇತ್ತು. ಅದಕ್ಕಾಗಿಯೇ ಎನ್‌ಒಸಿ ನೀಡಲಾಗಿತ್ತು. ಆದರೆ, ನೀರನ್ನು ಪಂಪ್‌ ಮಾಡಿ ಮೇಲೆತ್ತುವ ಯಾವುದೇ ವ್ಯವಸ್ಥೆಯನ್ನು ಕಟ್ಟಡದಲ್ಲಿ ಮಾಡಿರಲಿಲ್ಲ. ಈ ಕಾರಣದಿಂದ ಈಗ ಎನ್‌ಒಸಿಯನ್ನು ರದ್ದು ಮಾಡಲು ನಿರ್ಧರಿಸಿದ್ದೇವೆ’ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಇಲಾಖೆ ಹೇಳಿದೆ.

ಬುಲ್ಡೋಜರ್‌ ಸದ್ದು

ರಾಜಿಂದರ್‌ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾಲಿಕೆಯು ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದೆ. ಕೋಚಿಂಗ್ ಸೆಂಟರ್‌ಗಳಿರುವ ರಸ್ತೆಗಳಲ್ಲಿ ಬುಲ್ಡೋಜರ್‌ಗಳು ಓಡಾಡುತ್ತಿವೆ. ರಾಜಕಾಲುವೆಗಳನ್ನು ಒತ್ತುವರಿ ಮಾಡಿ ನಿರ್ಮಿಸಿರುವ ಕೆಲವು ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ. ನವದೆಹಲಿಯಲ್ಲಿ ಕೋಚಿಂಗ್‌ ಸೆಂಟರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಮುಖರ್ಜಿ ನಗರದಲ್ಲೂ ಒತ್ತುವರಿ ತೆರವು ಕಾರ್ಯ ಆರಂಭಿಸಲಾಗಿದೆ.

₹10 ಲಕ್ಷ ಪರಿಹಾರ

ದುರಂತದಲ್ಲಿ ಮೃತಪಟ್ಟ ಮೂವರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ನೀಡುವುದಾಗಿ ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಸೋಮವಾರ ಘೋಷಿಸಿದ್ದಾರೆ.

ದಿನದ ಬೆಳವಣಿಗೆ

*ಘಟನೆಯಿಂದಾಗಿ ಟೀಕೆಗೆ ಗುರಿಯಾಗಿರುವ ಎಂಸಿಡಿ, ಕರ್ತವ್ಯಲೋಪದ ಆರೋಪದಲ್ಲಿ ಕಿರಿಯ ಎಂಜಿನಿಯರ್‌ ಮತ್ತು ಸಹಾಯಕ ಎಂಜಿನಿಯರ್‌ವೊಬ್ಬರನ್ನು ಅಮಾನತು ಮಾಡಿದೆ

*‘ಅಗ್ನಿ ದುರಂತ ವ್ಯವಸ್ಥೆಗೆ ಸಂಬಂಧಿಸಿದಂತೆ ಕಟ್ಟಡದಲ್ಲಿ ಎಲ್ಲವೂ ನಿಯಮಾನುಸಾರವೇ ಇತ್ತು. ಅದಕ್ಕಾಗಿಯೇ ಎನ್‌ಒಸಿ ನೀಡಲಾಗಿತ್ತು. ಆದರೆ, ನೀರನ್ನು ಪಂಪ್‌ ಮಾಡಿ ಮೇಲೆತ್ತುವ ಯಾವುದೇ ವ್ಯವಸ್ಥೆಯನ್ನು ಕಟ್ಟಡದಲ್ಲಿ ಮಾಡಿರಲಿಲ್ಲ. ಈ ಕಾರಣದಿಂದ ಈಗ ಎನ್‌ಒಸಿಯನ್ನು ರದ್ದು ಮಾಡಲು ನಿರ್ಧರಿಸಿದ್ದೇವೆ’ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಇಲಾಖೆ ಹೇಳಿದೆ.

*ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ಕಾರ್ಯಾಲಯದ ಎದುರು ಆಮ್‌ ಆದ್ಮಿ ಪಕ್ಷದ ಪ್ರತಿಭಟನೆ ನಡೆಸಿದೆ

*ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ರಾಜೀನಾಮೆಗೆ ಬಿಜೆಪಿ ಆಗ್ರಹಿಸಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.