ADVERTISEMENT

ಸಂವಿಧಾನಕ್ಕೆ ತಿದ್ದುಪಡಿ: ಹೆಗಡೆ ಹೇಳಿಕೆ ವಿರೋಧಿಸಿ ದೆಹಲಿ ಕಾಂಗ್ರೆಸ್‌ ಧರಣಿ

ಪಿಟಿಐ
Published 12 ಮಾರ್ಚ್ 2024, 15:57 IST
Last Updated 12 ಮಾರ್ಚ್ 2024, 15:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸಂವಿಧಾನ ಬದಲಿಸುವ ಹೇಳಿಕೆ ವಿರೋಧಿಸಿ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

‘ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಿಗದಿಯಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ ಕಾರಣ ಯುವ ಕಾಂಗ್ರೆಸ್ ಘಟಕದ ಕಚೇರಿ ಬಳಿ ನಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದೇವೆ’ ಎಂದು ಪಕ್ಷದ ಮುಖಂಡ ಉದಿತ್ ರಾಜ್ ಹೇಳಿದ್ದಾರೆ.

‘ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಉಳಿಸಿ’ ಎಂಬ ಘೋಷವಾಕ್ಯದೊಂದಿಗೆ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಘೋಷಣೆ ಕೂಗಿದರು.

ADVERTISEMENT

‘ದೇಶದಲ್ಲಿ ಎಲ್ಲೆಲ್ಲಿ ಆರ್‌ಎಸ್‌ಎಸ್‌ ಶಾಖಾಗಳು ತಲೆ ಎತ್ತಿವೆಯೋ ಅಲ್ಲಿ ಎಲ್ಲಿಯೂ ಸೆಕ್ಷನ್ 144ರಡಿಯ ನಿಷೇಧಾಜ್ಞೆ ಜಾರಿಗೆ ಬಾರದು. ಆದರೆ ಸಾಮಾನ್ಯ ಜನರ ಪ್ರತಿಭಟನೆಗಳಿಗೆ ಮಾತ್ರ ಈ ಕಾನೂನುಗಳು ಜಾರಿಗೆ ತರಲಾಗುತ್ತಿದೆ’ ಎಂದು ಉದಿತ್ ರಾಜ್ ಆಕ್ರೋಶ ವ್ಯಕ್ತಪಡಿಸಿದರು.

‘ಸಂವಿಧಾನ ಬದಲಿಸುವ ಹೇಳಿಕೆ ನೀಡಿರುವ ಹೆಗಡೆ ಅವರ ಹೇಳಿಕೆ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆಯೇ ಅಥವಾ ಇಲ್ಲವೇ’ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟನಾಕಾರರು ಟೀಕಾ ಪ್ರಹಾರ ನಡೆಸಿದರು.

ಕರ್ನಾಟಕದ ಕಾರವಾರದಲ್ಲಿ ಸಭೆ ನಡೆಸಿ ಮಾತನಾಡಿದ್ದ ಸಂಸದ ಅನಂತಕುಮಾರ ಹೆಗಡೆ, ‘ಸಂವಿಧಾನಕ್ಕೆ ಕಾಂಗ್ರೆಸ್ ಮಾಡಿರುವ ವಿರೂಪಗಳು ಹಾಗೂ ಅನಗತ್ಯ ತಿದ್ದುಪಡಿಗಳನ್ನು ಬದಲಿಸಲು ಅಗತ್ಯ ತಿದ್ದಪಡಿ ಮಾಡಬೇಕೆಂದರೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ 3ನೇ 2ರಷ್ಟು ಬಹುಮತ ಅಗತ್ಯ’ ಎಂದಿದ್ದರು.

ಹೆಗಡೆ ಹೇಳಿಕೆ ವೈಯಕ್ತಿಕ ಎಂದಿರುವ ಬಿಜೆಪಿ, ಅವರಿಂದಲೇ ಸ್ಪಷ್ಟನೆ ಪಡೆಯುವಂತೆ ಹೇಳಿದೆ ಎಂದು ಪಿಟಿಐ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.