ನವದೆಹಲಿ: 2009ರಲ್ಲಿ ಗೃಹ ಖಾತೆಯ ರಾಜ್ಯ ಸಚಿವರಾಗಿದ್ದ ಅಜಯ್ ಮಾಕನ್ ಅವರ ಲೆಟರ್‌ಹೆಡ್ ನಕಲಿ ಮಾಡಿದ್ದ ಆರೋಪದಡಿ ದಾಖಲಾಗಿದ್ದ ಪ್ರಕರಣದಿಂದ ಶಸ್ತ್ರಾಸ್ತ್ರ ವ್ಯಾಪಾರಿ ಅಭಿಷೇಕ್ ವರ್ಮಾ ಮತ್ತು ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಅವರನ್ನು ದೆಹಲಿಯ ನ್ಯಾಯಾಲಯ ಖುಲಾಸೆಗೊಳಿಸಿದೆ ಎಂದು ಅವರ ಪರ ವಕೀಲರು ತಿಳಿಸಿದ್ದಾರೆ.
ಇಬ್ಬರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕಾವೇರಿ ಬವೇಜಾ ಅವರು ಆರೋಪಿಗಳನ್ನು ಖುಲಾಸೆಗೊಳಿಸಿದರು ಎಂದು ವರ್ಮಾ ಪರ ವಕೀಲ ಮಣೀಂದರ್ ಸಿಂಗ್ ತಿಳಿಸಿದರು.
2009ರಲ್ಲಿ ಬ್ಯುಸಿನೆಸ್ ವೀಸಾ ನಿಯಮಗಳನ್ನು ಸರಳಗೊಳಿಸುವಂತೆ ಕೋರಿ ವರ್ಮಾ ಅವರು ಅಜಯ್ ಮಾಕನ್ ಅವರ ಲೆಟರ್‌ಹೆಡ್ ನಕಲಿ ಮಾಡಿ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದರು ಎಂದು ಆರೋಪಿಸಲಾಗಿದೆ. ಈ ಕುರಿತು ಮಾಕನ್ ನೀಡಿದ್ದ ದೂರಿನ ಅನ್ವಯ, ಸಿಬಿಐ ಪ್ರಕರಣ ದಾಖಲಿಸಿತ್ತು.
‘ಟೈಟ್ಲರ್ ಅವರ ಸಂಪೂರ್ಣ ಸಹಕಾರದಿಂದಲೇ ವರ್ಮಾ ನಕಲಿ ಪತ್ರ ತಯಾರಿಸಿದ್ದರು. ಭಾರತದಲ್ಲಿ ವೀಸಾ ವಿಸ್ತರಣೆ ಸಂಬಂಧ ಚೀನಾ ಮೂಲದ ಟೆಲಿಕಾಂ ಕಂಪನಿಗೆ ಉದ್ದೇಶಪೂರ್ವಕವಾಗಿ ಸುಳ್ಳು ಭರವಸೆಯನ್ನು ಪತ್ರದ ಮೂಲಕ ನೀಡಲಾಗಿತ್ತು’ ಎಂದು ಸಿಬಿಐ ತನ್ನ ಚಾರ್ಜ್‌ಶೀಟ್‌ನಲ್ಲಿ ತಿಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.