ADVERTISEMENT

ವಿದೇಶ ಪ್ರವಾಸ: ಕಾರ್ತಿ ಚಿದಂಬರಂಗೆ ಕೋರ್ಟ್‌ ಅನುಮತಿ

ಪಿಟಿಐ
Published 13 ಜೂನ್ 2023, 14:47 IST
Last Updated 13 ಜೂನ್ 2023, 14:47 IST
ಕಾರ್ತಿ ಚಿದರಂಬರಂ
ಕಾರ್ತಿ ಚಿದರಂಬರಂ   

ನವದೆಹಲಿ: ಏರ್‌ಸೆಲ್‌– ಮ್ಯಾಕ್ಸಿಸ್‌ ಮತ್ತು ಐಎನ್‌ಎಕ್ಸ್‌ ಮೀಡಿಯಾ ಹಗರಣಗಳ ಆರೋಪಿಯಾಗಿರುವ ಕಾಂಗ್ರೆಸ್‌ ಸಂಸದ ಕಾರ್ತಿ ಚಿದರಂಬರಂ ಅವರಿಗೆ ಜೂನ್‌ 25ರಿಂದ ಜುಲೈ 17ರವರೆಗೆ ಸ್ಪೈನ್‌ ಮತ್ತು ಬ್ರಿಟನ್‌ ಪ್ರವಾಸಕ್ಕೆ ತೆರಳಲು ದೆಹಲಿಯ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ.

₹1 ಕೋಟಿಯನ್ನು ಭದ್ರತಾ ಠೇವಣಿಯಾಗಿ ಇಡಬೇಕು ಮತ್ತು ವಿದೇಶಗಳಲ್ಲಿ ಯಾವುದೇ ಬ್ಯಾಂಕ್‌ ಖಾತೆಯನ್ನು ತೆರೆಯುವಂತಿಲ್ಲ ಅಥವಾ ಮುಚ್ಚುವಂತಿಲ್ಲ ಹಾಗೂ ವಿದೇಶಗಳಲ್ಲಿ ಯಾವುದೇ ರೀತಿಯ ಆಸ್ತಿ ವಹಿವಾಟು ನಡೆಸುವಂತಿಲ್ಲ ಎಂದು ನ್ಯಾಯಾಧೀಶರಾದ ನರ್ಮಿತಾ ಅಗರ್ವಾಲ್‌ ಕಾರ್ತಿ ಅವರಿಗೆ ನಿರ್ದೇಶಿಸಿದರು.

‘ಕಾರ್ತಿ ಅವರು ನ್ಯಾಯಾಲಯದ ಅನುಮತಿ ಪಡೆದು ಈಗಾಗಲೇ ಕೆಲವು ಬಾರಿ ವಿದೇಶಕ್ಕೆ ಹೋಗಿ ಬಂದಿದ್ದಾರೆ. ಆ ವೇಳೆ ವಿಧಿಸಲಾಗಿದ್ದ ಷರತ್ತುಗಳನ್ನು ಅವರು ಉಲ್ಲಂಘಿಸಿಲ್ಲ’ ಎಂದು ನ್ಯಾಯಾಧೀಶರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಕಾರ್ತಿ ಅವರ ವಿರುದ್ಧ ಇ.ಡಿ ಮತ್ತು ಸಿಬಿಐ ನಾಲ್ಕು ಪ್ರಕರಣಗಳನ್ನು ದಾಖಲಿಸಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷಿ ನಾಶಕ್ಕೆ ಯತ್ನಿಸಬಾರದು ಎಂದಿರುವ ನ್ಯಾಯಾಲಯ, ಕಾರ್ತಿ ಅವರು ಭಾರತಕ್ಕೆ ಹಿಂದಿರುಗಿದ 48 ಗಂಟೆಗಳೊಳಗೆ ಪಾಸ್‌ಪೋರ್ಟ್‌ ಅನ್ನು ಒಪ್ಪಿಸಬೇಕು ಎಂದು ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.