ನವದೆಹಲಿ: ದೆಹಲಿ ಅಬಕಾರಿ ನೀತಿಯ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಬಂಧಿತರಾಗಿರುವ ಕೆ.ಕವಿತಾ ಅವರ ಜಾರಿ ನಿರ್ದೇಶನಾಲಯದ (ಇ.ಡಿ) ಕಸ್ಟಡಿ ಅವಧಿಯನ್ನು ಮಾರ್ಚ್ 26ರವರೆಗೆ ವಿಸ್ತರಿಸಿ ದೆಹಲಿ ನ್ಯಾಯಾಲಯವು ಇಂದು (ಶನಿವಾರ) ಆದೇಶ ಹೊರಡಿಸಿದೆ.
ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರಿ, 46 ವರ್ಷದ ಕವಿತಾ ಅವರನ್ನು ಇ.ಡಿ ಅಧಿಕಾರಿಗಳು ಮಾರ್ಚ್ 15ರಂದು ಹೈದರಾಬಾದ್‌ನ ಅವರ ನಿವಾಸದಲ್ಲಿಯೇ ಬಂಧಿಸಿತ್ತು. ಕವಿತಾ ಅವರನ್ನು ಮಾರ್ಚ್ 23ರವರೆಗೆ ಇ.ಡಿ ವಶಕ್ಕೆ ಒಪ್ಪಿಸಲಾಗಿತ್ತು.
ಇ.ಡಿ ಅಧಿಕಾರಿಗಳು ಕವಿತಾ ಅವರನ್ನು ಇಂದು ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯದ ಎದುರು ಹಾಜರುಪಡಿಸಿದ್ದರು. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ಹೋರಾಟ ನಡೆಸುತ್ತೇವೆ. ಚುನಾವಣೆಯ ಸಂದರ್ಭದಲ್ಲಿ ವಿರೋಧ ಪಕ್ಷಗಳ ನಾಯಕರನ್ನು ಬಂಧಿಸುವುದು ತಪ್ಪು. ಚುನಾವಣಾ ಆಯೋಗವು ಮಧ್ಯಪ್ರವೇಶಿಸಿ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು... ಜೈ ತೆಲಂಗಾಣ’ ಎಂದು ಘೋಷಣೆ ಕೂಗಿದ್ದಾರೆ.
ಅಬಕಾರಿ ನೀತಿ ಮೂಲಕ ಅನುಕೂಲ ಪಡೆದುಕೊಳ್ಳಲು ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ₹100 ಕೋಟಿ ನೀಡುವ ಮೂಲಕ ಕೆ. ಕವಿತಾ ‘ಸಂಚು’ ನಡೆಸಿದ್ದರು ಎಂದು ಇ.ಡಿ ಆರೋಪಿಸಿತ್ತು.
ಎಎಪಿ ಉನ್ನತ ನಾಯಕರಾದ ಅರವಿಂದ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಅವರ ಜೊತೆಗೂಡಿ ಕವಿತಾ ಮತ್ತು ಇತರರು ಸಂಚು ನಡೆಸಿದ್ದರು ಎಂದು ಇ.ಡಿ ಇತ್ತೀಚೆಗೆ ಹೇಳಿಕೆ ನೀಡಿತ್ತು.
ಇದೇ ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ವಿಶೇಷ ನ್ಯಾಯಾಲಯವು ಇದೇ 28ರವರೆಗೆ ಜಾರಿ ನಿರ್ದೇಶನಾಲಯದ (ಇ.ಡಿ) ವಶಕ್ಕೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.