ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಮಾಜಿ ಸಚಿವ ಮತ್ತು ಎಎಪಿ ನಾಯಕ ಸತ್ಯೇಂದ್ರ ಜೈನ್ ಅವರಿಗೆ ದೆಹಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ವಿಚಾರಣೆಯಲ್ಲಿ ವಿಳಂಬ ಮತ್ತು ಸುದೀರ್ಘ ಸಮಯದಿಂದ ಸೆರೆವಾಸ ಅನುಭವಿಸುತ್ತಿರುವುದನ್ನು ಪರಿಗಣಿಸಿ ಕೋರ್ಟ್ ಈ ಆದೇಶ ಮಾಡಿದೆ.
ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದ 4 ಕಂಪನಿಗಳ ಜೊತೆ ನಂಟು ಹಿನ್ನೆಲೆಯಲ್ಲಿ 2022ರ ಮೇ 30ರಂದು ಜೈನ್ ಅವರನ್ನು ಜಾರಿ ನಿರ್ದೇಶನಾಲಯ(ಇ.ಡಿ) ಬಂಧಿಸಿತ್ತು. ಸದ್ಯ, ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ವಿಚಾರಣೆ ವಿಳಂಬ, 18 ತಿಂಗಳ ಕಾಲ ಸುದೀರ್ಘ ಜೈಲುವಾಸ ಮತ್ತು ವಿಚಾರಣೆ ಆರಂಭವು ಮತ್ತಷ್ಟು ನಿಧಾನವಾಗುವ ಅಂಶಗಳನ್ನು ಪರಿಗಣಿಸಿ ಆರೋಪಿ ಪರವಾದ ತೀರ್ಪು ನೀಡುತ್ತಿರುವುದಾಗಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಸಾಲ್ ಗೊಗ್ನೆ ತಿಳಿಸಿದ್ದಾರೆ.
₹50,000 ಬಾಂಡ್ ಮತ್ತು ಇಬ್ಬರ ಶೂರಿಟಿ ಪಡೆದು ನ್ಯಾಯಾಲಯವು ಜಾಮೀನು ನೀಡಿದೆ.
2017ರ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸಿಬಿಐ ದಾಖಲಿಸಿರುವ ಎಫ್‌ಐಆರ್ ಆಧಾರದ ಮೇಲೆ ಇ.ಡಿ ಪ್ರಕರಣ ದಾಖಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.