ನವದೆಹಲಿ: ಅಬಕಾರಿ ನೀತಿ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ) ನೀಡಿದ ಸಮನ್ಸ್‌ಗೆ ಸ್ಪಂದಿಸಿಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದ ಆದೇಶದಲ್ಲಿ ಮಾರ್ಪಾಡು ಮಾಡಬೇಕು ಎಂದು ಕೋರಿ ಸಲ್ಲಿಸಿರುವ ಎರಡು ಅರ್ಜಿಗಳಿಗೆ ಇ.ಡಿ. ಸಲ್ಲಿಸಿರುವ ಪ್ರತಿಕ್ರಿಯೆಗೆ ಪ್ರತಿಹೇಳಿಕೆ ಸಲ್ಲಿಸಲು ದೆಹಲಿಯ ನ್ಯಾಯಾಲಯವೊಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಎರಡು ವಾರಗಳ ಸಮಯಾವಕಾಶ ನೀಡಿದೆ.
ಆದೇಶದ ಮಾರ್ಪಾಡು ಕೋರಿ ಕೇಜ್ರಿವಾಲ್ ಅವರು ಅರ್ಜಿ ಸಲ್ಲಿಸಿದ್ದಾರೆ. ಸಮನ್ಸ್‌ಗಳಿಂದ ಕೇಜ್ರಿವಾಲ್ ಅವರು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಇ.ಡಿ. ಸಲ್ಲಿಸಿದ ದೂರು ಆಧರಿಸಿ ಮ್ಯಾಜಿಸ್ಟೀರಿಯಲ್ ನ್ಯಾಯಾಲಯವೊಂದು ಕೇಜ್ರಿವಾಲ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಆದೇಶಿಸಿತ್ತು. ಇದನ್ನು ಕೇಜ್ರಿವಾಲ್ ಅವರು ವಿಶೇಷ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.
ಕೇಜ್ರಿವಾಲ್ ಅವರು ಜೈಲಿನಲ್ಲಿ ಇರುವ ಕಾರಣ ಅವರಿಂದ ಮಾಹಿತಿ ಪಡೆದುಕೊಳ್ಳುವುದು ತಮ್ಮಿಂದ ಆಗುತ್ತಿಲ್ಲ ಎಂದು ಕೇಜ್ರಿವಾಲ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಅದನ್ನು ಪರಿಗಣಿಸಿದ ನ್ಯಾಯಾಲಯವು ಎರಡು ವಾರಗಳ ಸಮಯಾವಕಾಶ ನೀಡಿತು. ಅರ್ಜಿಯ ವಿಚಾರಣೆಯನ್ನು ಮೇ 14ಕ್ಕೆ ಮುಂದೂಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.