ADVERTISEMENT

ಕೇಜ್ರಿವಾಲ್‌ಗೆ ಸಮನ್ಸ್‌ ಜಾರಿಗೆ ಕೋರ್ಟ್‌ ನಕಾರ

ಪಿಟಿಐ
Published 28 ಮೇ 2024, 13:59 IST
Last Updated 28 ಮೇ 2024, 13:59 IST
<div class="paragraphs"><p>ಅರವಿಂದ ಕೇಜ್ರಿವಾಲ್</p></div>

ಅರವಿಂದ ಕೇಜ್ರಿವಾಲ್

   

(ಪಿಟಿಐ ಚಿತ್ರ)

ನವದೆಹಲಿ: ಬಿಜೆಪಿ ಮುಖಂಡ ಪ್ರವೀಣ್ ಶಂಕರ್ ಕಪೂರ್ ಸಲ್ಲಿಸಿರುವ ಕ್ರಿಮಿನಲ್ ಮೊಕದ್ದಮೆಯ ವಿಚಾರಣೆ ಸಂದರ್ಭದಲ್ಲಿ ಖುದ್ದು ಹಾಜರಿರುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಸೂಚಿಸಲು ದೆಹಲಿಯ ನ್ಯಾಯಾಲಯವೊಂದು ನಿರಾಕರಿಸಿದೆ.

ADVERTISEMENT

ಬಿಜೆಪಿಯನ್ನು ಸೇರಲು ಎಎಪಿ ಮುಖಂಡರಿಗೆ ಹಣದ ಆಮಿಷ ಒಡ್ಡಲಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದು ಮಾನನಷ್ಟಕ್ಕೆ ಸಮ ಎಂದು ಕಪೂರ್ ಅವರು ಆರೋಪಿಸಿದ್ದಾರೆ.

ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ತಾನ್ಯಾ ಬಾಮನಿಯಾಲ್ ಅವರು ಎಎಪಿ ನಾಯಕಿ, ಕೇಜ್ರಿವಾಲ್ ನೇತೃತ್ವದ ಸಂಪುಟದಲ್ಲಿ ಸಚಿವೆಯಾಗಿರುವ ಆತಿಶಿ ಅವರಿಗೆ ಸಮನ್ಸ್ ಜಾರಿಗೆ ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಆತಿಶಿ ವಿರುದ್ಧ ಮೇಲ್ನೋಟಕ್ಕೆ ಅಗತ್ಯ ಸಾಕ್ಷ್ಯಗಳು ಇವೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಆತಿಶಿ ಅವರು ಜೂನ್ 29ರಂದು ವಿಚಾರಣೆಗೆ ಖುದ್ದಾಗಿ ಹಾಜರಾಗಬೇಕು ಎಂದು ಸೂಚಿಸಿದ್ದಾರೆ.

ಬಿಜೆಪಿಯು ಹಣದ ಆಮಿಷ ಒಡ್ಡಿ ಎಎಪಿ ಮುಖಂಡರನ್ನು ತನ್ನತ್ತ ಸೆಳೆಯಲು ಯತ್ನಿಸುತ್ತಿದೆ ಎಂದು ಕೇಜ್ರಿವಾಲ್ ಮತ್ತು ಆತಿಶಿ ಅವರು ಆರೋಪ ಮಾಡಿದ್ದಕ್ಕಾಗಿ ಕಪೂರ್ ಅವರು ಪ್ರಕರಣ ದಾಖಲಿಸಿದ್ದರು.

ಕೇಜ್ರಿವಾಲ್ ಅವರು ತಪ್ಪು ಮಾಡಿದ್ದಾರೆ ಎನ್ನಲು ಮೇಲ್ನೋಟಕ್ಕೆ ಆಧಾರಗಳು ಇಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಕೇಜ್ರಿವಾಲ್ ಮತ್ತು ಆತಿಶಿ ಅವರು ಬಿಜೆಪಿ ವಿರುದ್ಧ ಹೊರಿಸಿರುವ ಆರೋಪಗಳು ಸುಳ್ಳು, ಆರೋಪವನ್ನು ಪುಷ್ಟೀಕರಿಸಲು ಇವರಿಬ್ಬರೂ ಯಾವುದೇ ಆಧಾರ ಒದಗಿಸಿಲ್ಲ ಎಂದು ಕಪೂರ್ ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.