ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಹಣ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಎಎಪಿ ನಾಯಕ ಸಂಜಯ್ ಸಿಂಗ್ ಅವರನ್ನು ದೆಹಲಿ ನ್ಯಾಯಾಲಯವು ಅಕ್ಟೋಬರ್ 10ರವರೆಗೆ ಜಾರಿ ನಿರ್ದೇಶನಾಲಯದ(ಇ.ಡಿ) ಕಸ್ಟಡಿಗೆ ಒಪ್ಪಿಸಿದೆ.
ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ.ಕೆ. ನಾಗ್ಪಾಲ್ ಅವರು, 5 ದಿನಗಳ ಕಾಲ ಇ.ಡಿ ಕಸ್ಟಡಿಗೆ ಆದೇಶಿಸಿದರು. ಕಸ್ಟಡಿ ಅವಧಿ ಮುಗಿದ ಬಳಿಕ ಸಿಂಗ್ ಅವರನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
ನ್ಯಾಯಾಲಯಕ್ಕೆ ಕರೆ ತರುವ ವೇಳೆ, ನನ್ನ ಬಂಧನವು ಪ್ರಧಾನಿ ನರೇಂದ್ರ ಮೋದಿಯವರು ನನಗೆ ಮಾಡಿದ ಅನ್ಯಾಯ. ಅವರ ಪಕ್ಷ 2024ರ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಲಿದೆ ಎಂದು ಸಂಜಯ್ ಸಿಂಗ್ ಕಿಡಿಕಾರಿದರು. ಅಲ್ಲದೆ, ತಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಸಿಂಗ್ ನ್ಯಾಯಾಲಯದ ಮುಂದೆ ಹೇಳಿದ್ದಾರೆ.
ಪ್ರಕರಣದಲ್ಲಿ ಅಪ್ರೂವರ್ ಆಗಿರುವ ಉದ್ಯಮಿ ದಿನೇಶ್ ಅರೋರಾ ನಿಮಗೆ ₹2 ಕೋಟಿ ಲಂಚ ನೀಡಿದ್ದಾರೆ ಎಂದು ಇ.ಡಿ ಹೇಳುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿಂಗ್, ‘ಈ ಹಿಂದೆ ಅಮಿತ್ ಅರೋರಾ ಹಲವು ಹೇಳಿಕೆಗಳನ್ನು ನೀಡಿದ್ದಾರೆ. ಆಗ ಅವರಿಗೆ ನನ್ನ ಹೆಸರು ನೆನಪಿರಲಿಲ್ಲ. ಈಗ ದಿಢೀರನೆ ಅವರಿಗೆ ನನ್ನ ಹೆಸರು ಜ್ಞಾಪಕಕ್ಕೆ ಬಂದಿದೆ. ನನಗೆ ಒಮ್ಮಯೂ ಸಮನ್ಸ್ ನೀಡಿಲ್ಲ. ನನ್ನ ವಿಚಾರದಲ್ಲಿ ಮಾತ್ರ ಏಕೆ ಹೀಗೆ? ಒಬ್ಬೊಬ್ಬರಿಗೆ ಒಂದೊಂದು ಕಾನೂನಿದೆಯೇ’ ಎಂದು ಪ್ರಶ್ನಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಬೆಳಿಗ್ಗೆಯಿಂದ ಅವರ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದ ಇ.ಡಿ ಅಧಿಕಾರಿಗಳು ಸಂಜೆ ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.