ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧಿತ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಮಾರ್ಚ್ 28ರವರೆಗೆ ಜಾರಿ ನಿರ್ದೇಶನಾಲಯದ(ಇ.ಡಿ) ಕಸ್ಟಡಿಗೆ ಒಪ್ಪಿಸಿ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಆದೇಶಿಸಿದೆ.
ಕೇಜ್ರಿವಾಲ್ ಅವರನ್ನು 28ರಂದು ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದು ರೋಸ್ ಅವೆನ್ಯೂ ನ್ಯಾಯಾಲಯದ ನ್ಯಾಯಾಧೀಶರಾದ ಕಾವೇರಿ ಭವೇಜಾ ಆದೇಶಿಸಿದ್ದಾರೆ.
ಕೇಜ್ರಿವಾಲ್ ಅವರನ್ನು ವಿಚಾರಣೆಗಾಗಿ 10 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಇ.ಡಿ ಮಾಡಿದ ಮನವಿ ಆಲಿಸಿದ ನ್ಯಾಯಾಲಯ ಈ ಆದೇಶ ನೀಡಿದೆ.
ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧಿತ ಹಣ ಅಕ್ರಮ ವರ್ಗಾವಣೆ ಆರೋಪದಡಿ ಗುರುವಾರ ರಾತ್ರಿ ಕೇಜ್ರಿವಾಲ್ ಅವರನ್ನು ಬಂಧಿಸಿದ ಇ.ಡಿ, ಇಂದು ಮಧ್ಯಾಹ್ನ 2ರ ಸುಮಾರಿಗೆ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ವಾದಗಳನ್ನು ಆಲಿಸಿದ ನ್ಯಾಯಾಲಯ ಕೆಲ ಸಮಯದವರೆಗೆ ಆದೇಶವನ್ನು ಕಾಯ್ದಿರಿಸಿತ್ತು.
2021–22ರ ಅಬಕಾರಿ ನೀತಿ ರಚನೆ ಮತ್ತು ಜಾರಿ ಸಂಬಂಧ ಕೇಜ್ರಿವಾಲ್, ಹಲವು ಕೋಟಿಗಳಷ್ಟು ಹಣವನ್ನು ದಕ್ಷಿಣ ಭಾರತದ ಸಮೂಹವೊಂದರಿಂದ ಪಡೆದುಕೊಂಡಿದ್ದಾರೆ ಎಂದು ಇ.ಡಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು.
ದಕ್ಷಿಣದ ಸಮೂಹವೊಂದರ ಆರೋಪಿಯೊಬ್ಬರಿಂದ ಪಂಜಾಬ್ ಚುನಾವಣೆಗಾಗಿ ಕೇಜ್ರಿವಾಲ್ ಅವರು ₹100 ಕೋಟಿ ಡಿಮ್ಯಾಂಡ್ ಮಾಡಿದ್ದರು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್(ಎಎಸ್‌ಜಿ) ಎಸ್.ವಿ. ರಾಜು ಇ.ಡಿ ಪರ ವಾದ ಮಂಡಿಸಿದ್ದರು.
4 ಹವಾಲಾ ಮಾರ್ಗಗಳಿಂದ ಬಂದ ₹45 ಕೋಟಿ ಹಣವನ್ನು ಗೋವಾ ಚುನಾವಣೆಗೆ ಬಳಸಲಾಗಿದೆ ಎಂದೂ ಅವರು ವಾದಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.