ADVERTISEMENT

ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್ ಸೇರಿ ಐವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ CBI

ಏಜೆನ್ಸೀಸ್
Published 29 ಜುಲೈ 2024, 5:35 IST
Last Updated 29 ಜುಲೈ 2024, 5:35 IST
<div class="paragraphs"><p>ಅರವಿಂದ ಕೇಜ್ರಿವಾಲ್</p></div>

ಅರವಿಂದ ಕೇಜ್ರಿವಾಲ್

   

ಪಿಟಿಐ ಚಿತ್ರ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದ ತನಿಖೆಯನ್ನು ಪೂರ್ಣಗೊಳಿಸಿರುವ ಸಿಬಿಐ ಅಧಿಕಾರಿಗಳು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಎಎಪಿ ಶಾಸಕ ದುರ್ಗೇಶ್ ಪಾಠಕ್ ಸೇರಿದಂತೆ ಐವರ ವಿರುದ್ಧ ಅಂತಿಮ ದೋಷಾರೋಪ ಪಟ್ಟಿಯನ್ನು ಸೋಮವಾರ ಸಲ್ಲಿಸಿದ್ದಾರೆ.

ADVERTISEMENT

ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ತೆಲಂಗಾಣದ ವಿಧಾನ ಪರಿಷತ್ ಸದಸ್ಯೆ ಕೆ. ಕವಿತಾ ಹಾಗೂ 15 ಮಂದಿ ಇತರರ ವಿರುದ್ಧ ಸಿಬಿಐ ಅಧಿಕಾರಿಗಳು ಈ ಹಿಂದೆ ಒಂದು ಮುಖ್ಯ ದೋಷಾರೋಪ ಪಟ್ಟಿ ಹಾಗೂ ನಾಲ್ಕು ‍‍ಪೂರಕ ದೋಷಾರೋಪ ಪಟ್ಟಿಗಳನ್ನು ಸಲ್ಲಿಸಿದ್ದರು.

ಸೋಮವಾರ ಸಲ್ಲಿಕೆಯಾಗಿರುವುದು ಅಂತಿಮ ದೋಷಾರೋಪ ಪಟ್ಟಿ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಕೇಜ್ರಿವಾಲ್, ಪಾಠಕ್, ಅರಬಿಂದೊ ಫಾರ್ಮಾ ಕಂಪನಿಯ ಕಾರ್ಯನಿರ್ವಾಹಕೇತರ ನಿರ್ದೇಶಕ ಪಿ. ಶರತ್ ಚಂದ್ರ ರೆಡ್ಡಿ, ಬಡಿ ರಿಟೇಲ್ ಪ್ರೈ.ಲಿ. ಕಂಪನಿಯ ನಿರ್ದೇಶಕ ಅಮಿತ್ ಅರೋರಾ, ಹಣದ ಅಕ್ರಮ ವರ್ಗಾವಣೆಯಲ್ಲಿ ತೊಡಗಿರುವ ವ್ಯಕ್ತಿ ಎನ್ನಲಾದ ವಿನೋದ್ ಚೌಹಾಣ್, ಉದ್ಯಮಿ ಆಶಿಷ್ ಮಾಥುರ್ ಅವರನ್ನು ಆರೋಪಿಗಳು ಎಂದು ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾಗಿದೆ.

ಆರೋಪ ಏನು?:

ಮದ್ಯ ಉದ್ಯಮಿ ಮಗುಂಟ ಶ್ರೀನಿವಾಸಲು ರೆಡ್ಡಿ (ಈಗ ಟಿಡಿಪಿ ಸಂಸದ) ಅವರು ಕೇಜ್ರಿವಾಲ್ ಅವರನ್ನು 2021ರ ಮಾರ್ಚ್‌ 16ರಂದು ದೆಹಲಿ ಸಚಿವಾಲಯದಲ್ಲಿನ ಕಾರ್ಯಾಲಯದಲ್ಲಿ ಭೇಟಿ ಮಾಡಿದರು ಎಂದು ಸಿಬಿಐ ಆರೋಪಿಸಿದೆ.

ಆಗ ಸಿದ್ಧವಾಗುತ್ತಿದ್ದ ‘ಅಬಕಾರಿ ನೀತಿ 2021–22’ರಲ್ಲಿ ಅಗತ್ಯ ಬದಲಾವಣೆಗಳನ್ನು ತಂದು ತಮ್ಮ ಮದ್ಯದ ಉದ್ಯಮಕ್ಕೆ ನೆರವು ಒದಗಿಸುವಂತೆ ರೆಡ್ಡಿ ಅವರು ಕೇಜ್ರಿವಾಲ್ ಅವರನ್ನು ಕೋರಿದರು ಎಂದು ಕೆ. ಕವಿತಾ ಅವರ ವಿರುದ್ಧದ ದೋಷಾರೋಪ ಪಟ್ಟಿಯಲ್ಲಿ ಸಿಬಿಐ ಆರೋಪಿಸಿದೆ. 

ನೆರವು ಒದಗಿಸುವ ಭರವಸೆ ನೀಡಿದ ಕೇಜ್ರಿವಾಲ್ ಅವರು, ನೀತಿಯ ವಿಚಾರವಾಗಿ ತಮ್ಮ ತಂಡದ ಜೊತೆ ಕೆಲಸ ಮಾಡುತ್ತಿರುವ ಕವಿತಾ ಅವರನ್ನು ಭೇಟಿ ಮಾಡುವಂತೆ ತಿಳಿಸಿದರು. ಅಲ್ಲದೆ, ಕೇಜ್ರಿವಾಲ್ ಅವರು ಸಹಾಯಕ್ಕೆ ಪ್ರತಿಯಾಗಿ ತಮ್ಮ ಎಎಪಿ ಪಕ್ಷಕ್ಕೆ ಹಣಕಾಸಿನ ನೆರವು ನೀಡುವಂತೆ ರೆಡ್ಡಿ ಅವರಿಗೆ ಹೇಳಿದರು ಎಂದು ಆರೋಪ ಹೊರಿಸಲಾಗಿದೆ.

ಎಎಪಿಗೆ ಸೇರಿದ ಕೆಲವು ರಾಜಕಾರಣಿ ಗಳಿಗೆ, ಕೆಲವು ಸರ್ಕಾರಿ ಅಧಿಕಾರಿಗಳಿಗೆ ದಕ್ಷಿಣ ಭಾರತದ ಮದ್ಯದ ಉದ್ಯಮದ ಕೆಲವರು ಸಹ ಆರೋಪಿಗಳಾದ ವಿಜಯ್ ನಾಯರ್, ಅಭಿಷೇಕ್ ಬೊಯಿನಪಲ್ಲಿ ಮತ್ತು ದಿನೇಶ್ ಅರೋರಾ ಅವರ ಮೂಲಕ ₹90 ಕೋಟಿಯಿಂದ ₹100 ಕೋಟಿವರೆಗೆ ಹಣವನ್ನು ಮುಂಗಡವಾಗಿ ಪಾವತಿಸಿದರು. ಅಬಕಾರಿ ನೀತಿಯಲ್ಲಿ ಬದಲಾವಣೆ ತರಲು ಈ ಹಣ ಪಾವತಿಸ ಲಾಯಿತು ಎಂದು ಸಿಬಿಐ ಹೇಳಿದೆ.

ಸಿಸೋಡಿಯಾ ಅರ್ಜಿ ಆಗಸ್ಟ್‌ 5ಕ್ಕೆ ವಿಚಾರಣೆ

ನವದೆಹಲಿ: ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಭ್ರಷ್ಟಾಚಾರ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಕೋರಿ ಎಎಪಿ ನಾಯಕ ಮನೀಶ್‌ ಸಿಸೋಡಿಯಾ ಅವರು ಸಲ್ಲಿಸಿರುವ ಅರ್ಜಿಗಳನ್ನು ಆಗಸ್ಟ್‌ 5ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಸೋಮವಾರ ತಿಳಿಸಿದೆ.

ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ ಮತ್ತು ಕೆ.ವಿ. ವಿಶ್ವನಾಥನ್‌ ಅವರನ್ನು ಒಳಗೊಂಡ ನ್ಯಾಯಪೀಠದ ಎದುರು  ಅರ್ಜಿಗಳನ್ನು ವಿಚಾರಣೆ ನಡೆಸಲು ಪಟ್ಟಿ ಮಾಡಲಾಗಿದೆ.

ಸೊರೇನ್‌ಗೆ ಜಾಮೀನು ಪ್ರಶ್ನಿಸಿದ್ದ ಅರ್ಜಿ ವಜಾ

ನವದೆಹಲಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂ‌ತ್ ಸೊರೇನ್ ಅವರಿಗೆ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ನೀಡಿದ ಜಾರ್ಖಂಡ್ ಹೈಕೋರ್ಟ್‌ನ ನಿರ್ಧಾರ ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ವಜಾಗೊಳಿಸಿದೆ.

ಹೈಕೋರ್ಟ್‌ ಜೂನ್ 28ರಂದು ನೀಡಿದ ಆದೇಶವು ‘ಸಕಾರಣಗಳಿಂದ ಕೂಡಿದೆ’ ಎಂದು ನ್ಯಾಯಮೂರ್ತಿ
ಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರು ಇದ್ದ ವಿಭಾಗೀಯ ಪೀಠವು ಹೇಳಿದೆ. ‘ಈ ಆದೇಶದಲ್ಲಿ ನಾವು ಮಧ್ಯಪ್ರವೇಶ ಮಾಡಬೇಕಾಗಿಲ್ಲ’ ಎಂದು ಪೀಠವು ಸ್ಪಷ್ಟಪಡಿಸಿದೆ.

ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಅಬಕಾರಿ ನೀತಿ ಹಗರಣದ ಪ್ರಮುಖ
ಸೂತ್ರದಾರಾಗಿದ್ದಾರೆ ಎಂದು ದೆಹಲಿ ಹೈಕೋರ್ಟ್‌ನಲ್ಲಿ ಸೋಮವಾರ ಪ್ರತಿಪಾದಿಸಿದ ಸಿಬಿಐ, ಕೇಜ್ರಿವಾಲ್‌ ಅವರ ಜಾಮೀನು ಅರ್ಜಿಗೆ ತೀವ್ರ ವಿರೋಧ ದಾಖಲಿಸಿತು.

ಕೇಜ್ರಿವಾಲ್‌ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನೀನಾ ಬನ್ಸಾಲ್‌ ಕೃಷ್ಣ ಅವರು ತೀರ್ಪನ್ನು ಕಾಯ್ದಿರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.