ADVERTISEMENT

ಅಬಕಾರಿ ನೀತಿ ಹಗರಣ ಪ್ರಕರಣ: ಕೇಜ್ರಿವಾಲ್ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ HC

ಪಿಟಿಐ
Published 17 ಜುಲೈ 2024, 12:55 IST
Last Updated 17 ಜುಲೈ 2024, 12:55 IST
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

– ಪಿಟಿಐ ಚಿತ್ರ

ನವದೆಹಲಿ: ಅಬಕಾರಿ ನೀತಿ ಹರಗಣದಲ್ಲಿ ತಮ್ಮನ್ನು ಬಂಧಿಸಿದ ಸಿಬಿಐ ಕ್ರಮವನ್ನು ‍ಪ್ರಶ್ನಿಸಿ ಹಾಗೂ ಮಧ್ಯಂತರ ಜಾಮೀನು ನೀಡಬೇಕು ಎಂದು ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ದೆಹಲಿ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.

ಮೊಹರಂ ರಜೆ ಇದ್ದದ್ದರಿಂದ ನ್ಯಾಯಮೂರ್ತಿಗಳಾದ ನೀನಾ ಬನ್ಸಾಲ್ ಖನ್ನಾ ಅವರು ಕೋರ್ಟ್ ಕಲಾಪವನ್ನು ನಡೆಸಿದರು. ಉಭಯ ಪಕ್ಷಗಾರರ ವಾದವನ್ನು ಆಲಿಸಿದ ಪೀಠವು, ತೀರ್ಪನ್ನು ಕಾಯ್ದಿರಿಸಿತು.

ADVERTISEMENT

’ಜೈಲಿನಿಂದ ಹೊರಗೆ ಬರುವುದನ್ನು ತಡೆಯಲು ಸಿಬಿಐ ಉದ್ದೇಶಪೂರ್ವವಕಾಗಿ ಕೇಜ್ರಿವಾಲ್ ಅವರನ್ನು ಬಂಧಿಸಿದೆ’ ಎಂದು ಅವರ ಪರ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು.

‘ಕಟ್ಟುನಿಟ್ಟಾದ ನಿಯಮಗಳಡಿ ಇ.ಡಿ ದಾಖಲಿಸಿಕೊಂಡ ಮೂರು ‍‍ಪ್ರಕರಣಗಳಲ್ಲಿ ಕೋರ್ಟ್ ಬಿಡುಗಡೆ ಆದೇಶ ನೀಡಿದೆ. ಆ ಆದೇಶಗಳು ಅವರನ್ನು ಬಿಡುಗಡೆ ಮಾಡಬೇಕು ಎನ್ನುವುದನ್ನು ಸೂಚಿಸುತ್ತದೆ. ಅವರು ಬಿಡುಗಡೆಯಾಗುತ್ತಿದ್ದರು, ಆದರೆ ಕುತಂತ್ರದಿಂದ ಅವರನ್ನು ಬಂಧಿಸಲಾಗಿದೆ’ ಎಂದು ಸಿಂಘ್ವಿ ಹೇಳಿದರು.

‘ಕೇಜ್ರಿವಾಲ್ ಭಯೋತ್ಪಾದಕರಲ್ಲ. ಅವರು ದೆಹಲಿಯ ಮುಖ್ಯಮಂತ್ರಿ. ಅವರ ಬಂಧನ ಕಾನೂನು ಚೌಕಟ್ಟಿನಲ್ಲಿರಲಿಲ್ಲ. ದೆಹಲಿ ಸಿಎಂ ಎನ್ನುವ ಕಾರಣಕ್ಕೆ ಬಂಧಿಸಲಾಗಿದೆ. ಅವರು ಜಾಮೀನು ಪಡೆಯಲು ಅರ್ಹರು’ ಎಂದು ಹೇಳಿದರು.

ಕೇಜ್ರಿವಾಲ್ ಅವರ ಮನವಿಯನ್ನು ಪುರಸ್ಕರಿಸಬಾರದು ಎಂದು ವಾದಿಸಿದ ಸಿಬಿಐ ಪರ ವಕೀಲ ಡಿ.ಪಿ ಸಿಂಗ್‌, ಕುತಂತ್ರದ ಭಾಗವಾಗಿ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ ಎನ್ನುವ ವಾದ ಸರಿಯಲ್ಲ ಎಂದರು.

ಇದೇ ಪ್ರಕರಣದಲ್ಲಿ ಇ.ಡಿಯಿಂದ ಬಂಧಿತರಾಗಿ ತಿಹಾರ್‌ ಜೈಲಿನಲ್ಲಿದ್ದ ಅರವಿಂದ ಕೇಜ್ರಿವಾಲ್ ಅವರನ್ನು ಜೂನ್ 26ರಂದು ಬಂಧಿಸಿತ್ತು. ಇ.ಡಿ ಪ್ರಕರಣದಲ್ಲಿ ಜುಲೈ 12ರಂದು ಸುಪ್ರೀಂ ಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.