ADVERTISEMENT

ಹಣ ಅಕ್ರಮ ವರ್ಗಾವಣೆ ಪ್ರಕರಣ: ದೆಹಲಿ ಸಿಎಂ ಕೇಜ್ರಿವಾಲ್‌ಗೆ ತಪ್ಪದ ಜೈಲು

ಪಿಟಿಐ
Published 21 ಜೂನ್ 2024, 6:14 IST
Last Updated 21 ಜೂನ್ 2024, 6:14 IST
   

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದ ಜೊತೆ ನಂಟಿನ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶಕ್ಕೆ ದೆಹಲಿ ಹೈಕೋರ್ಟ್‌ ಶುಕ್ರವಾರ ಮಧ್ಯಂತರ ತಡೆ ನೀಡಿದೆ. ಹೀಗಾಗಿ, ಅರವಿಂದ ಕೇಜ್ರಿವಾಲ್‌ ಅವರ ಜೈಲುವಾಸ ಮುಂದುವರಿದಿದೆ.

ಅರ್ಜಿ ವಿಚಾರಣೆ ನಡೆಸಿದ, ನ್ಯಾಯಮೂರ್ತಿ ಸುಧೀರಕುಮಾರ್ ಜೈನ್ ಅವರಿದ್ದ ರಜಾಕಾಲದ ಪೀಠ, ಸಂಬಂಧಪಟ್ಟ ಪಕ್ಷಗಾರರು ಜೂನ್ 24ರ ಒಳಗಾಗಿ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಸೂಚಿಸಿದೆ.

‘ಜಾಮೀನು ಆದೇಶಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಪರಿಶೀಲಿಸಬೇಕಿದೆ. ಹೀಗಾಗಿ, 2–3 ದಿನಗಳ ಕಾಲ ಆದೇಶವನ್ನು ಕಾಯ್ದಿರಿಸಲಾಗುವುದು’ ಎಂದೂ ನ್ಯಾಯಪೀಠ ಹೇಳಿದೆ.

ADVERTISEMENT

ವಿಚಾರಣಾ ನ್ಯಾಯಾಲಯ ತಮಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿ ಪ್ರತಿಕ್ರಿಯೆ ಸಲ್ಲಿಸುವಂತೆ ಅರವಿಂದ ಕೇಜ್ರಿವಾಲ್‌ ಅವರಿಗೆ ಸೂಚನೆ ನೀಡಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಜುಲೈ 10ಕ್ಕೆ ಮುಂದೂಡಿತು.

ಆಮ್‌ ಆದ್ಮಿ ಪಕ್ಷದ (ಎಎಪಿ) ಸಂಚಾಲಕರೂ ಆಗಿರುವ ಕೇಜ್ರಿವಾಲ್‌ ಅವರನ್ನು ಜಾರಿ ನಿರ್ದೇಶನಾಲಯ ಮಾರ್ಚ್ 21ರಂದು ಬಂಧಿಸಿತ್ತು. 

ಇ.ಡಿ ವಾದ: ಇದಕ್ಕೂ ಮುನ್ನ, ವಿಚಾರಣಾ ನ್ಯಾಯಾಲಯ ಕೇಜ್ರಿವಾಲ್‌ ಅವರಿಗೆ ಜಾಮೀನು ನೀಡಿ ಹೊರಡಿಸಿದ್ದ ಆದೇಶಕ್ಕೆ ಹೆಚ್ಚುವರಿ ಸಾಲಿಸಿಟರ್ ಜನರಲ್‌ ಎಸ್‌.ವಿ.ರಾಜು ವಿರೋಧ ವ್ಯಕ್ತಪಡಿಸಿದ್ದರು. 

ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ತ್ವರಿತ ವಿಚಾರಣೆಗೆ ರಾಜು ಮನವಿ ಮಾಡಿದರು.

‘ವಿಚಾರಣಾ ನ್ಯಾಯಾಲಯದ ಆದೇಶವು ತರ್ಕಕ್ಕೆ ವಿರುದ್ಧವಾಗಿದ್ದು, ಏಕಪಕ್ಷೀಯ ಹಾಗೂ ತಪ್ಪಿನಿಂದ ಕೂಡಿದೆ. ಅಪ್ರಸ್ತುತ ಸಂಗತಿಗಳ ಆಧಾರದಲ್ಲಿ ಜಾಮೀನು ನೀಡಲಾಗಿದೆ. ವಿಶೇಷ ನ್ಯಾಯಾಧೀಶರು ಸಂಬಂಧಿಸಿದ ಅಂಶಗಳನ್ನು ಪರಿಗಣಿಸಿಯೇ ಇಲ್ಲ’ ಎಂದು ಎಸ್‌.ವಿ.ರಾಜು ವಾದಿಸಿದರು.

‘ತನ್ನ ವಾದ ಮಂಡಿಸಲು ಜಾರಿ ನಿರ್ದೇಶನಾಲಯಕ್ಕೆ ಸಾಕಷ್ಟು ಅವಕಾಶ ನೀಡಲಾಗಿಲ್ಲ. ಲಭ್ಯವಿರುವ ಸಾಕ್ಷ್ಯಗಳನ್ನು  ವಿಚಾರಣಾ ನ್ಯಾಯಾಲಯ ಪರಿಗಣಿಸಿಲ್ಲ. ಹೀಗಾಗಿ, ಜಾಮೀನು ರದ್ದುಗೊಳಿಸುವುದಕ್ಕೆ ಇದಕ್ಕಿಂತ ಉತ್ತಮವೆನಿಸುವ ಬೇರೆ ಪ್ರಕರಣ ಇರಲಿಕ್ಕಿಲ್ಲ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಕೇಜ್ರಿವಾಲ್‌ ಪರ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ,‘ಜಾರಿ ನಿರ್ದೇಶನಾಲಯ ಪರ ವಕೀಲರು ವಿಚಾರಣಾ ನ್ಯಾಯಾಲಯದಲ್ಲಿ 3 ಗಂಟೆ 45 ನಿಮಿಷಗಳಷ್ಟು ಕಾಲ ವಾದ ಮಂಡಿಸಿದ್ದಾರೆ’ ಎಂದರು.

‘ಕೇಜ್ರಿವಾಲ್‌ ಅವರಿಗೆ ಜಾಮೀನು ನೀಡಿ ಹೊರಡಿಸಿರುವ ಆದೇಶಕ್ಕೆ ತಡೆಯಾಜ್ಞೆ ನೀಡಬಾರದು. ಇಲ್ಲದೇ ಹೋದರೆ, ಬಲವಾದ ಸಂದರ್ಭಗಳನ್ನು ಮುಂದು ಮಾಡಿ ಕೇಜ್ರಿವಾಲ್‌ ಅವರನ್ನು ಮತ್ತೆ ಜೈಲಿಗೆ ಕಳುಹಿಸಲಾಗುತ್ತದೆ’ ಎಂದೂ ಸಿಂಘ್ವಿ ಹೇಳಿದರು.

ವಾದ–ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠ, ವಿಚಾರಣಾ ನ್ಯಾಯಾಲಯವು ಕೇಜ್ರಿವಾಲ್‌ ಅವರಿಗೆ ಜಾಮೀನು ನೀಡಿ ಹೊರಡಿಸಿದ್ದ ಆದೇಶಕ್ಕೆ ಗುರುವಾರ ಸಂಜೆ ತಡೆ ನೀಡಿ ಆದೇಶಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.