ಹೈದರಾಬಾದ್: ಮಾರ್ಚ್ 11 ರಂದು ವಿಚಾರಣೆಗೆ ಹಾಜರಾಗುವುದಾಗಿ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಅವರು ಜಾರಿ ನಿರ್ದೇಶನಾಲಯ (ಇ.ಡಿ)ಕ್ಕೆ ಬುಧವಾರ ತಿಳಿಸಿದ್ದಾರೆ.
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಬುಧವಾರ ನೋಟಿಸ್ ಜಾರಿ ಮಾಡಿದ್ದ ಇ.ಡಿ ಮಾರ್ಚ್ 9ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು.
ವಿಚಾರಣೆಗೆ ಹಾಜರಾಗಲು ಒಂದು ವಾರದ ಕಾಲಾವಕಾಶ ಕೋರಿ ಕವಿತಾ ಅವರು ಇ.ಡಿಗೆ ಮನವಿ ಮಾಡಿದ್ದರು. ಆದರೆ ಇಡಿ ಅವರ ಮನವಿಯನ್ನು ತಿರಸ್ಕರಿಸಿತ್ತು. ನಂತರ ಕವಿತಾ ಇ.ಡಿಗೆ ಮತ್ತೊಂದು ಪತ್ರ ಬರೆದಿದ್ದರು.
ಬುಧವಾರ ತಡರಾತ್ರಿ ಕವಿತಾ ಅವರ ಕಚೇರಿಯಿಂದ ಈ ಕುರಿತು ಪ್ರಕಟಣೆ ಹೊರಡಿಸಲಾಗಿದೆ.
‘ನಾನು ಜವಾಬ್ದಾರಿಯುತ ಭಾರತೀಯ ನಾಗರಿಕಳಾಗಿದ್ದೇನೆ. ಈ ರಾಷ್ಟ್ರದ ಮಹಿಳೆಯಾಗಿ ಕಾನೂನಿನ ಅಡಿಯಲ್ಲಿ ಒದಗಿಸಲಾದ ನನ್ನ ಹಕ್ಕುಗಳಿಗೆ ಅನುಗುಣವಾಗಿ ನಡೆದುಕೊಳ್ಳಲಿದ್ದೇನೆ’ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
‘ವಿಚಾರಣೆಗೆ ಹಾಜರಾಗಲು ಹೇಳಿ ಇಷ್ಟು ಕಡಿಮೆ ಸಮಯ ನೀಡಿರುವ ಬಗ್ಗೆ ನನಗೆ ಅರ್ಥವಾಗುತ್ತಿಲ್ಲ. ತನಿಖೆ ಹಿಂದೆ ಕೆಲವು ರಾಜಕೀಯ ಉದ್ದೇಶಗಳು ಇರುವುದು ಇದರಲ್ಲಿ ಕಾಣುತ್ತಿದೆ. ಸದ್ಯದ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ನಾನು ಮುಂದಿನ ವಾರದ ಕಾರ್ಯಕ್ರಮಗಳನ್ನು ಈಗಾಗಲೇ ನಿಗದಿ ಮಾಡಿಕೊಂಡಿದ್ದೇನೆ. ವಿಚಾರಣೆಗೆ ಕಾಲಾವಕಾಶ ಕೋರಿ ನಾನು ಮಾಡಿದ ವಿನಂತಿಯನ್ನು ನಿರಾಕರಸಿರುವುದರ ಹಿಂದೆ ನಿಮಗೆಲ್ಲರಿಗೂ ಗೊತ್ತಿರುವ ಕಾರಣ ಇದ್ದೇ ಇದೆ. ಇದು ರಾಜಕೀಯ ಪ್ರೇರಿತವೇ ಹೊರತು ಬೇರೇನೂ ಅಲ್ಲ’ ಎಂದು ಕವಿತಾ ಉಲ್ಲೇಖಿಸಿದ್ದಾರೆ.
‘ಆದಾಗ್ಯೂ, ಈ ದೇಶದ ಕಾನೂನು ಪಾಲಿಸುವ ಜವಾಬ್ದಾರಿಯುತ ಪ್ರಜೆಯಾಗಿ ನಾನು ಮಾರ್ಚ್ 11ರಂದು ನಿಮ್ಮ (ಇ.ಡಿ) ಕಚೇರಿಗೆ ಹಾಜರಾಗಲಿದ್ದೇನೆ’ ಎಂದು ಅವರು ಹೇಳಿದ್ದಾರೆ.
ಬುಧವಾರ ಸಂಜೆ ದೆಹಲಿಗೆ ತೆರಳಿದ ಕವಿತಾ ಅವರು ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಲು ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿ ಮಾರ್ಚ್ 10 ರಂದು ದೆಹಲಿಯಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಯಾವ ತಪ್ಪೂ ಮಾಡಿಲ್ಲ: ಕವಿತಾ
‘ನಾನು ಯಾವ ತಪ್ಪೂ ಮಾಡಿಲ್ಲ. ಹೀಗಾಗಿ ಹೆದರುವ ಪ್ರಶ್ನೆಯೇ ಇಲ್ಲ. ಜಾರಿ ನಿರ್ದೇಶನಾಲಯದ ಎದುರು ಶನಿವಾರ ವಿಚಾರಣೆಗೆ ಹಾಜರಾಗುತ್ತೇನೆ’ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಗುರುವಾರ ಹೇಳಿದ್ದಾರೆ.
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ನಡೆದಿದೆ ಎನ್ನಲಾಗಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ತನಿಖೆಗೆ ಹಾಜರಾಗುವಂತೆ ಕವಿತಾ ಅವರಿಗೆ ಇ.ಡಿ, ಬುಧವಾರ ಸಮನ್ಸ್ ಜಾರಿಗೊಳಿಸಿತ್ತು.
ಈ ಕುರಿತು ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯು 9 ರಾಜ್ಯಗಳಲ್ಲಿ ಹಿಂಬಾಗಿಲಿನಿಂದ ಪ್ರವೇಶಿಸಿ ಅಧಿಕಾರದ ಗದ್ದುಗೆ ಏರಿದೆ. ತೆಲಂಗಾಣದಲ್ಲಿ ಅದು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಇ.ಡಿ ಅಸ್ತ್ರವನ್ನು ಪ್ರಯೋಗಿಸುತ್ತಿದೆ. ಇದಕ್ಕೆಲ್ಲಾ ನಾವು ಹೆದರುವುದಿಲ್ಲ’ ಎಂದು ಹೇಳಿದ್ದಾರೆ.
‘ನಮ್ಮಂತಹವರಿಗೆ ಕಿರುಕುಳ ನೀಡುವುದರಿಂದ ನಿಮಗೆ ಸಿಗುವುದಾದರೂ ಏನು? ಬೆಲೆ ಏರಿಕೆ ತಗ್ಗಿಸಿ. ಉದ್ಯೋಗ ಸೃಷ್ಟಿಗೆ ಒತ್ತು ನೀಡಿ. ಹೆಚ್ಚಿನ ಸಬ್ಸಿಡಿಗಳನ್ನು ಕೊಡಿ’ ಎಂದು ಬಿಆರ್‌ಎಸ್ ಪಕ್ಷದ ವಿಧಾನಪರಿಷತ್ ಸದಸ್ಯೆಯೂ ಆಗಿರುವ ಕವಿತಾ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ಸೂಚಿಸಿರುವ ಅವರು ಇದಕ್ಕಾಗಿ ಇದೇ 10ರಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿಯೂ ಹೇಳಿದ್ದಾರೆ. 18 ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದೂ ತಿಳಿಸಿದ್ದಾರೆ.
ಇದನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.