ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಎಲ್ಲಾ ಆರೋಪಿಗಳ ವಿರುದ್ಧ ಕೇಂದ್ರ ತನಿಖಾ ದಳ (ಸಿಬಿಐ) ಲುಕ್ ಔಟ್ ನೋಟಿಸ್ ಜಾರಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ದೆಹಲಿಯ ಹೊಸ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿರುವ ಸಿಬಿಐ, ಟೆಂಡರ್ ನಂತರದ ಸನ್ನದುದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಅಬಕಾರಿ ನೀತಿಯನ್ನು ರೂಪಿಸಲಾಗಿತ್ತು ಎಂದು ಉಲ್ಲೇಖಿಸಿದೆ.
2021-22ನೇ ಸಾಲಿನ ದೆಹಲಿಯ ಜಿಎನ್‌ಸಿಟಿಡಿಯ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮತ್ತು ಅನುಷ್ಠಾನಗೊಳಿಸುವಲ್ಲಿ ಅಕ್ರಮಗಳು ನಡೆದಿವೆ ಎಂಬ ದೂರಿನ ಆಧಾರದಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿದೆ.
‘ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಅಂದಿನ ಅಬಕಾರಿ ಆಯುಕ್ತ ಅರ್ವಾ ಗೋಪಿ ಕೃಷ್ಣ, ಅಬಕಾರಿ ಇಲಾಖೆಯ ಅಂದಿನ ಉಪ ಆಯುಕ್ತ ಆನಂದ್ ತಿವಾರಿ ಮತ್ತು ಅಬಕಾರಿ ಇಲಾಖೆ ಸಹಾಯಕ ಆಯುಕ್ತ ಪಂಕಜ್ ಭಟ್ನಾಗರ್ ಅಬಕಾರಿ ನೀತಿಗೆ ಸಂಬಂಧಿಸಿದ ಶಿಫಾರಸು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2021-22ನೇ ಸಾಲಿನ ಅಬಕಾರಿ ನೀತಿಯನ್ನು ಸಕ್ಷಮ ಪ್ರಾಧಿಕಾರದ ಅನುಮೋದನೆಯಿಲ್ಲದೆ ಟೆಂಡರ್ ನಂತರ ಪರವಾನಗಿದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ರೂಪಿಸಲಾಗಿತ್ತು’ ಎಂದು ಆರೋಪಿಸಲಾಗಿದೆ.
‘ಮನರಂಜನಾ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯಾದ ‘ಓನ್ಲಿ ಮಚ್ ಲೌಡರ್’ನ ಮಾಜಿ ಸಿಇಒ ವಿಜಯ್ ನಾಯರ್, ‘ಪೆರ್ನೋಡ್ ರಿಕಾರ್ಡ್’ನ ಮಾಜಿ ಉದ್ಯೋಗಿ ಮನೋಜ್ ರೈ, ‘ಬ್ರಿಂಡ್ಕೊ ಸ್ಪಿರಿಟ್ಸ್’ ಮಾಲೀಕ ಅಮನದೀಪ್ ಧಾಲ್ ಮತ್ತು ‘ಇಂಡೋ ಸ್ಪಿರಿಟ್ಸ್’ನ ಮಾಲೀಕ ಸಮೀರ್ ಮಹೇಂದ್ರು ಅವರು ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮತ್ತು ಅನುಷ್ಠಾನಗೊಳಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು’ ಎಂದೂ ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ಬಿಜೆಪಿ - ಎಎಪಿ ವಾಕ್ಸಮರ
ದೆಹಲಿ ಸರ್ಕಾರದ ಅಬಕಾರಿ ನೀತಿ ಜಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಬಿಜೆಪಿ ಹಾಗೂ ಎಎಪಿ ನಾಯಕರ ನಡುವೆ ವಾಕ್ಸಮರ ನಡೆದಿದೆ.
ಸಿಸೋಡಿಯಾ ಅವರನ್ನು ಮೊದಲ ಆರೋಪಿ ಎಂದು ಹೆಸರಿಸಿದ್ದರೂ ಕೇಜ್ರಿವಾಲ್ ಅವರೇ ಪ್ರಕರಣದ ಸೂತ್ರಧಾರ ಎಂದು ಬಿಜೆಪಿ ಆರೋಪಿಸಿದೆ. ಕೇಜ್ರಿವಾಲ್ ಬಗ್ಗೆ ಇರುವ ಭೀತಿಯಿಂದಾಗಿ ಬಿಜೆಪಿಯು ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಬೆದರಿಸುವ ಯತ್ನ ಮಾಡುತ್ತಿದೆ ಎಂದು ಎಎಪಿ ತಿರುಗೇಟು ನೀಡಿದೆ.
ಇವುಗಳನ್ನೂ ನೋಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.