ADVERTISEMENT

ಅಬಕಾರಿ ನೀತಿ ಹಗರಣ | ಸಿಬಿಐ, ಇ.ಡಿ ವಿರುದ್ಧ ಕೋರ್ಟ್‌ಗೆ: ಕೇಜ್ರಿವಾಲ್

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2023, 22:15 IST
Last Updated 15 ಏಪ್ರಿಲ್ 2023, 22:15 IST
   

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಸಿಬಿಐ ಸಮನ್ಸ್‌ ನೀಡಿರುವುದು, ಆಮ್‌ ಆದ್ಮಿ ಪಕ್ಷ (ಎಎಪಿ) ಸೇರಿದಂತೆ ವಿಪಕ್ಷಗಳು ಮತ್ತು ಬಿಜೆಪಿ ನಡುವಿನ ವಾಗ್ಯುದ್ಧಕ್ಕೆ ಕಾರಣವಾಗಿದೆ.

‘ನಮ್ಮ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ. ಹೀಗಾಗಿ, ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ (ಇ.ಡಿ) ವಿರುದ್ಧ ಕೋರ್ಟ್‌ನಲ್ಲಿ ಸೂಕ್ತ ಪ್ರಕರಣಗಳನ್ನು ದಾಖಲಿಸುತ್ತೇವೆ’ ಎಂದು ಕೇಜ್ರಿವಾಲ್ ಗುಡುಗಿದ್ದಾರೆ.

ವಿಚಾರಣೆಗಾಗಿ ಸಿಬಿಐ ಎದುರು ಭಾನುವಾರ ಹಾಜರಾಗುವೆ ಎಂದೂ ಹೇಳಿದ್ದಾರೆ. ಇನ್ನೊಂದೆಡೆ, ಕೇಜ್ರಿವಾಲ್‌ ಪರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌, ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ನಿಂತಿದ್ದಾರೆ. ಅವರ ವಿರುದ್ಧವೂ ಬಿಜೆಪಿ ವಾಗ್ದಾಳಿ ನಡೆಸಿದೆ.

ADVERTISEMENT

‘ಎಎಪಿ ತುಳಿಯುವ ಹುನ್ನಾರ’: ‘ದೇಶದ ಜನತೆಗೆ ಎಎಪಿ ಆಶಾಕಿರಣವಾಗಿ ಹೊರಹೊಮ್ಮಿದೆ. ಪಕ್ಷವು, ಬಡತನವನ್ನು ಹೋಗಲಾಡಿಸುವ ಜೊತೆಗೆ ತಮ್ಮನ್ನು ಸುಶಿಕ್ಷಿತರನ್ನಾಗಿ ಮಾಡುತ್ತದೆ ಎಂಬ ಭರವಸೆ ಜನರಲ್ಲಿ ಮೂಡಿದೆ. ಆದರೆ, ಪಕ್ಷವನ್ನು ಗುರಿಯಾಗಿಸುವ ಮೂಲಕ ಜನರಲ್ಲಿನ ಆಶಾಭಾವನೆಯನ್ನು ತುಳಿಯುವ ಕೆಲಸ ಮಾಡಲಾಗುತ್ತಿದೆ’ ಎಂದು ಕೇಜ್ರಿವಾಲ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಇಡೀ ಬೆಳವಣಿಗೆಯ ಕೇಂದ್ರ ಬಿಂದುವೇ ದೆಹಲಿ ಅಬಕಾರಿ ನೀತಿಯಾಗಿದೆ. ಇದು ಅತ್ಯುತ್ತಮ ನೀತಿಯಾಗಿದ್ದು, ಪಕ್ಷವು ಆಡಳಿತದಲ್ಲಿರುವ ಪಂಜಾಬ್‌ ನಲ್ಲಿ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.