ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಇಸ್ರೇಲ್‌ನ ರಾಯಭಾರಿ ಕಚೇರಿ ಬಳಿ ಮಂಗಳವಾರ ಸಂಜೆ ಸ್ಫೋಟ ನಡೆದಿದೆ ಎನ್ನಲಾಗಿರುವುದು ಮತ್ತು ಸ್ಫೋಟ ಬೆದರಿಕೆಯ ಸಂದೇಶ ಪತ್ರವು ದೊರೆತಿರುವುದು ಆತಂಕಕ್ಕೆ ಕಾರಣವಾಗಿದೆ.
ಪೊಲೀಸರು ಮತ್ತು ವಿಧಿವಿಜ್ಞಾನ ತಜ್ಞರು ಸ್ಥಳದಲ್ಲಿ ಶೋಧ ನಡೆಸಿದ್ದರೂ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ದೆಹಲಿ ಪೊಲೀಸರ ವಿಶೇಷ ಘಟಕ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖಾಧಿಕಾರಿಗಳು ಕೂಡ ಸ್ಥಳಕ್ಕೆ ದೌಡಾಯಿಸಿದ್ದಾರೆ.
ರಾಯಭಾರ ಕಚೇರಿಯ ಸಮೀಪ ಸ್ಫೋಟ ನಡೆದಿದೆ ಎಂದು ಇಸ್ರೇಲ್ ರಾಯಭಾರ ಕಚೇರಿ ದೃಢಪಡಿಸಿದೆ. ಸಂಜೆ 5:48 ರ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಇಸ್ರೇಲ್ ರಾಯಭಾರ ಕಚೇರಿಯ ವಕ್ತಾರ ಗೈ ನಿರ್ ಹೇಳಿದ್ದಾರೆ.
ಇಸ್ರೇಲ್ ರಾಯಭಾರಿಯನ್ನು ಉದ್ದೇಶಿಸಿ ಟೈಪ್ ಮಾಡಿದ ಪತ್ರವು ಸ್ಫೋಟ ನಡೆದಿದೆ ಎನ್ನಲಾಗುತ್ತಿರುವ ರಾಯಭಾರಿ ಕಚೇರಿಯ ಹಿಂಭಾಗದ ಉದ್ಯಾನ ಪ್ರದೇಶದಲ್ಲಿ ಪತ್ತೆಯಾಗಿದೆ. ತನಿಖಾಧಿಕಾರಿಗಳು ಮತ್ತು ವಿಧಿವಿಜ್ಞಾನ ತಜ್ಞರು ಈ ಪತ್ರವನ್ನು ವಶಪಡಿಸಿಕೊಂಡಿದ್ದಾರೆ.
ಘಟನೆ ಸಂಬಂಧ ಪೊಲೀಸರಿಗೆ ಹೇಳಿಕೆ ನೀಡಿರುವ ಭದ್ರತಾ ಸಿಬ್ಬಂದಿ ತೇಜು ಛಿತ್ರಿ ‘ಭಾರಿ ಶಬ್ದ ಕೇಳಿಸಿತು. ಆರಂಭದಲ್ಲಿ ಟಯರ್ ಒಡೆದಿರಬಹುದೆಂದು ಭಾವಿಸಿದ್ದೆ. ಹೊರಗಡೆ ಬಂದು ನೋಡಿದಾಗ ಮರದ ತುದಿಯಿಂದ ಹೊಗೆ ಕಾಣಿಸಿತು’ ಎಂದು ಸುದ್ದಿಗಾರರಿಗೆ ತಿಳಿಸಿದರು.
‘ನಮ್ಮ ಎಲ್ಲಾ ರಾಜತಾಂತ್ರಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಈ ಘಟನೆ ಬಗ್ಗೆ ಮತ್ತಷ್ಟು ತನಿಖೆಗೆ ದೆಹಲಿ ಭದ್ರತಾ ಅಧಿಕಾರಿಗಳೊಂದಿಗೆ ನಮ್ಮ ಭದ್ರತಾ ತಂಡಗಳು ಸಂಪೂರ್ಣ ಸಹಕಾರ ನೀಡುತ್ತಿವೆ’ ಎಂದು ಇಸ್ರೇಲ್ ರಾಯಭಾರ ಕಚೇರಿಯ ಉಪ ಮುಖ್ಯಸ್ಥ ಓಹಾದ್ ನಕಾಶ್ ಕಯ್ನಾರ್ ಹೇಳಿದ್ದಾರೆ.
2021ರ ಜನವರಿಯಲ್ಲಿ ರಾಯಭಾರ ಕಚೇರಿಯ ಬಳಿ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿತ್ತು. ಆಗ ಕೆಲವು ಕಾರುಗಳಿಗೆ ಹಾನಿಯಾಗಿತ್ತು. 2012ರ ಫೆಬ್ರುವರಿಯಲ್ಲಿ ಇಸ್ರೇಲ್ ರಾಯಭಾರ ಕಚೇರಿಯ ಬಳಿ, ಕಾರಿನ ಕೆಳಗೆ ಬಾಂಬ್ ಇರಿಸಲಾಗಿತ್ತು. ಆಗ, ರಾಜತಾಂತ್ರಿಕರ ಪತ್ನಿ ಗಾಯಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.