ADVERTISEMENT

ದೆಹಲಿ 'ಸೋನು ಸೂದ್' ಎನಿಸಿಕೊಂಡಿದ್ದ ರೈತ ಪಪ್ಪನ್ ಸಿಂಗ್ ಆತ್ಮಹತ್ಯೆ

ಐಎಎನ್ಎಸ್
Published 24 ಆಗಸ್ಟ್ 2022, 12:51 IST
Last Updated 24 ಆಗಸ್ಟ್ 2022, 12:51 IST
ಪಪ್ಪನ್ ಸಿಂಗ್
ಪಪ್ಪನ್ ಸಿಂಗ್   

ನವದೆಹಲಿ:ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಬಿಹಾರ ಮೂಲದ ತಮ್ಮ ಮನೆಯ ಆಳುಗಳನ್ನು ವಿಮಾನದಲ್ಲಿ ಊರಿಗೆ ಕಳುಹಿಸಿ ಕೊಟ್ಟು ಗಮನ ಸೆಳೆದಿದ್ದ ಉತ್ತರ ದೆಹಲಿಯ ರೈತ ಪಪ್ಪನ್ ಸಿಂಗ್ ಗೆಹಲೋತ್ (55) ದೇವಸ್ಥಾನದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

‘ಅನಾರೋಗ್ಯ ಹಾಗೂ ಮಾನಸಿಕ ನೋವಿನಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನಾನೇ ಹೊಣೆ’ ಎಂದು ಡೆತ್ ನೋಟ್ ಬರೆದಿಟ್ಟು ಮಂಗಳವಾರ ಉತ್ತರ ದೆಹಲಿ ಹೊರವಲಯದ ತಿಗಿಪುರ್ ಎಂಬ ಹಳ್ಳಿಯ ಶಿವ ದೇವಸ್ಥಾನವೊಂದರ ಆವರಣದಲ್ಲಿ ಗಿಡಕ್ಕೆ ನೇಣು ಬಿಗಿದುಕೊಂಡು ಪಪ್ಪನ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

2020ರ ಮಾರ್ಚ್‌ನಲ್ಲಿ ದೇಶದಾದ್ಯಂತ ಕೋವಿಡ್ ಲಾಕ್‌ಡೌನ್ ಜಾರಿಯಾದ ನಂತರ ಅನೇಕ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಪರದಾಡಿದ್ದರು. ಇದೇ ವೇಳೆ ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ 10ಕ್ಕೂ ಹೆಚ್ಚು ಬಿಹಾರದ ಆಳುಗಳನ್ನು ಪಪ್ಪನ್ ಅವರು ವಿಮಾನದ ಮೂಲಕ ತವರಿಗೆ ಕಳುಹಿಸಿಕೊಟ್ಟು ಗಮನ ಸೆಳೆದಿದ್ದರು. ಅಲ್ಲದೇ ಕಾರ್ಮಿಕರಿಗೆ ಸಹಾಯ ಮಾಡುವುದರಲ್ಲಿ ಮುಂಚೂಣಿಯಲ್ಲಿದ್ದರು.

ADVERTISEMENT

ಈ ಘಟನೆಯಿಂದ ಪಪ್ಪನ್ ಸಿಂಗ್ ಅವರು ‘ದೆಹಲಿ ಸೋನು ಸೂದ್’ ಎಂಬ ಹೊಗಳಿಕೆಗೆ ಪಾತ್ರರಾಗಿದ್ದರು. ಅನೇಕ ಸೆಲಿಬ್ರಿಟಿಗಳು ಪಪ್ಪನ್ ಅವರ ಗುಣಗಾನ ಮಾಡಿದ್ದರು. ಮಶ್ರೂಮ್ ಬೆಳೆಯಲ್ಲಿ ಪಪ್ಪನ್ ಅವರು ಮುಂಚೂಣಿಯಲ್ಲಿದ್ದರು.

ಬಾಲಿವುಡ್ ನಟ ಸೋನು ಸೂದ್ ಅವರು ತಮ್ಮ ವೈಯಕ್ತಿಕ ಹಣಕಾಸಿನಲ್ಲಿ ಬಡವರಿಗೆ ನೆರವು ನೀಡುವ ಮೂಲಕ ಹೆಚ್ಚಿನ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.