ನವದೆಹಲಿ: ’ದೆಹಲಿಯಲ್ಲಿ ವಾಯು ವಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಮೋಡ ಬಿತ್ತನೆ ಮೂಲಕ ಕೃತಕ ಮಳೆಯಾಗುವಂತೆ ಪ್ರಯತ್ನ ಕೈಗೊಳ್ಳಲಾಗುವುದು‘ ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಬುಧವಾರ ತಿಳಿಸಿದರು.
’ಐಐಟಿ ಕಾನ್ಪುರ ವಿಜ್ಞಾನಿಗಳ ಜತೆ ಈ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ವಾತಾವರಣದಲ್ಲಿ ಮೋಡುಗಳು ಅಥವಾ ತೇವಾಂಶ ಇದ್ದರೆ ಮಾತ್ರ ಮೋಡ ಬಿತ್ತನೆ ಸಾಧ್ಯ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ. ನವೆಂಬರ್ 20 ಅಥವಾ 21ಕ್ಕೆ ಅಂತಹ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಪ್ರಸ್ತಾವ ಸಿದ್ಧಪಡಿಸುವಂತೆ ವಿಜ್ಞಾನಿಗಳಿಗೆ ಸೂಚಿಸಲಾಗಿದೆ. ಈ ಪ್ರಸ್ತಾವವನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗುವುದು‘ ಎಂದು ತಿಳಿಸಿದರು.
‘ಸಮ ಹಾಗೂ ಬೆಸ ನೋಂದಣಿ ಸಂಖ್ಯೆ ಆಧಾರದಲ್ಲಿ ಕಾರುಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವ ಯೋಜನೆಯನ್ನು ಸುಪ್ರೀಂ ಕೋರ್ಟ್ ಪರಾಮರ್ಶಿಸಿ ಆದೇಶ ನೀಡಿದ ಬಳಿಕ ಜಾರಿಗೊಳಿಸಲಾಗುವುದು’ ಎಂದು ಗೋಪಾಲ್ ರೈ ತಿಳಿಸಿದರು.
‘ಸಮ– ಬೆಸ ಸಂಖ್ಯೆಯ ಯೋಜನೆ ಕುರಿತು ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು 'ಎನರ್ಜಿ ಪಾಲಿಸಿ ಇನ್‌ಸ್ಟಿಟ್ಯೂಟ್ ಆಫ್ ದಿ ಯೂನಿವರ್ಸಿಟಿ ಆಫ್ ಷಿಕಾಗೊ‘ ನಡೆಸಿದ ಎರಡು ಪ್ರಮುಖ ಅಧ್ಯಯನದ ಫಲಿತಾಂಶಗಳನ್ನು ಸುಪ್ರೀಂ ಕೋರ್ಟ್‌ಗೆ ದೆಹಲಿ ಸರ್ಕಾರ ಸಲ್ಲಿಸಲಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಮ ಹಾಗೂ ಬೆಸ ನೋಂದಣಿ ಸಂಖ್ಯೆ ಆಧಾರದಲ್ಲಿ ಕಾರುಗಳ ಸಂಚಾರ ಕ್ರಮದ ಪರಿಣಾಮಕಾರಿಗಳು ಏನು ಎನ್ನುವ ಕುರಿತು ಸುಪ್ರೀಂ ಕೋರ್ಟ್ ದೆಹಲಿ ಸರ್ಕಾರವನ್ನು ಮಂಗಳವಾರ ಪ್ರಶ್ನಿಸಿತ್ತು. ಹೀಗಾಗಿ, ಗೋಪಾಲ್ ಅವರು ಎರಡು ಅಧ್ಯಯನಗಳ ಫಲಿತಾಂಶಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.
‘ದೆಹಲಿಯಲ್ಲಿ ತಾಜ್ಯ ಸುಡುತ್ತಿರುವ ಪರೀಕ್ಷಿಸಲು ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು. ಇದಕ್ಕಾಗಿಯೇ 611 ತಂಡ ರಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಷಿಕಾಗೊ ವಿಶ್ವವಿದ್ಯಾಲಯದ ಇಂಧನ ನೀತಿ ಸಂಸ್ಥೆ ಮತ್ತು ದಿ ಎವಿಡೆನ್ಸ್ ಫಾರ್ ಪಾಲಿಸಿ ಡಿಸೈನ್ ಸಂಸ್ಥೆಯು ದೆಹಲಿಯ ವಾಯುಮಾಲಿನ್ಯ ಸಮ ಹಾಗೂ ಬೆಸ ನೋಂದಣಿ ಸಂಖ್ಯೆ ಆಧಾರದಲ್ಲಿ ಕಾರುಗಳ ಸಂಚಾರ ಕ್ರಮ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದರ ಕುರಿತು 2016ರಲ್ಲಿ ಅಧ್ಯಯನ ನಡೆಸಿದ್ದವು.
‘ಈ ಕ್ರಮದಿಂದ ದೆಹಲಿಯ ವಾಯುಮಾಲಿನ್ಯದಿಂದ ಉತ್ಪತ್ತಿಯಾಗುವ ಪಿ.ಎಂ 2.5 ಮಾಲಿನ್ಯಕಾರಕಗಳ ಪ್ರಮಾಣದಲ್ಲಿ ಶೇಕಡಾ 14ರಿಂದ 16ರಷ್ಟು ಇಳಿಕೆಯಾಗಿತ್ತು’ ಎಂದು ಅಧ್ಯಯನದಿಂದ ತಿಳಿದು ಬಂದಿತ್ತು. ಆದರೆ, ಅದೇ ವರ್ಷದ ಏಪ್ರಿಲ್‌ನಲ್ಲಿ ಈ ಕ್ರಮವನ್ನು ಜಾರಿಗೊಳಿಸಿದಾಗ ಮಾಲಿನ್ಯದಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿರಲಿಲ್ಲ ಎಂಬುದು ಇಲ್ಲಿ ಗಮನಾರ್ಹ.
ರಜೆ: ವಾಯುಮಾಲಿನ್ಯ ಅಪಾಯಕಾರಿ ಸ್ಥಿತಿ ತಲುಪಿದ್ದರಿಂದ ದೆಹಲಿಯ ಎಲ್ಲ ಶಾಲೆಗಳಿಗೆ ನ.9ರಿಂದ 18ರವರೆಗೆ ರಜೆ ಘೋಷಿಸಲಾಗಿದೆ.
ಪ್ರಸ್ತುತ ದೆಹಲಿ ಗಾಳಿಯ ಗುಣಮಟ್ಟ ಸೂಚ್ಯಂಕವು 320 ಇದೆ. ಈ ವಾರದ ಆರಂಭದಲ್ಲಿ ಈ ಸೂಚ್ಚಂಕ 400ರ ಗಡಿ ದಾಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.