ನವದೆಹಲಿ: ಹಳೆ ರಾಜಿಂದರ್ ನಗರದ ಕೋಚಿಂಗ್ ಸೆಂಟರ್‌ನ ದುರಂತ ಘಟನೆಯ ನಂತರ ಎಚ್ಚೆತ್ತಿರುವ ದೆಹಲಿ ಸರ್ಕಾರ, ಶಾಲಾ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಭದ್ರತೆಗಾಗಿ ಬುಧವಾರ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಶಿಕ್ಷಣ ನಿರ್ದೇಶನಾಲಯ (ಡಿಒಇ) ಹೊರಡಿಸಿದ ಮಾರ್ಗಸೂಚಿಗಳು ಈ ರೀತಿ ಇವೆ.
ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಕಟ್ಟಡಗಳಲ್ಲಿ ನೆಲಮಾಳಿಗೆಯ ಬಳಕೆಗೆ ಸಂಬಂಧಿಸಿ ದೆಹಲಿ ಮಾಸ್ಟರ್ ಪ್ಲ್ಯಾನ್‌ನ 2021ರ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಶಾಲೆಯ ಆವರಣ ಮತ್ತು ಸುತ್ತಮುತ್ತ ನೀರು ನಿಲ್ಲುವುದನ್ನು ತಪ್ಪಿಸಲು ಶಾಲಾ ಆಡಳಿತ ಮಂಡಳಿ ಅಧಿಕಾರಿಗಳು ಮತ್ತು ಸಂಬಂಧಿಸಿದವರು ತಮ್ಮ ಮಟ್ಟದಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು.
ದೆಹಲಿ ರಾಜಧಾನಿಯ ಪ್ರದೇಶದಲ್ಲಿನ (ಜಿಎನ್‌ಸಿಟಿ) ಎಲ್ಲ ಶಾಲೆಗಳು ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಭದ್ರತೆ ಖಾತ್ರಿಪಡಿಸಿಕೊಳ್ಳುವುದು ಅತ್ಯಗತ್ಯ.
ಯಾವುದೇ ಅಹಿತಕರ ಘಟನೆಯನ್ನು ತಪ್ಪಿಸಲು ಅಗತ್ಯ ಮೂಲಸೌಕರ್ಯ ಹೊಂದಿರಬೇಕು.
ಶಾಲಾ ಕಟ್ಟಡಗಳಲ್ಲಿ ನೆಲಮಾಳಿಗೆಯನ್ನು ಮಾಸ್ಟರ್ ಪ್ಲಾನ್‌ನ ನಿಬಂಧನೆಗಳ ಪ್ರಕಾರ ಮತ್ತು ಮಂಜೂರಾದ ಯೋಜನೆಯ ಪ್ರಕಾರ ಅನುಮತಿಸುವ ಚಟುವಟಿಕೆಗಳಿಗೆ ಮಾತ್ರ ಬಳಸುತ್ತಿರುವುದನ್ನು ಪ್ರಾಂಶುಪಾಲರು ಖಚಿತಪಡಿಸಿಕೊಳ್ಳಬೇಕು.
ಶಾಲಾ ಕಟ್ಟಡದ ಎಲ್ಲ ಗೇಟ್‌ಗಳು ಬಳಕೆಯಲ್ಲಿರಬೇಕು. ಪ್ರವೇಶ ಮತ್ತು ನಿರ್ಗಮನಕ್ಕೆ ಈ ಗೇಟ್‌ಗಳನ್ನು ತೆರೆಯಬೇಕು.
ನೆಲಮಾಳಿಗೆಯ ಪ್ರವೇಶ ಮತ್ತು ನಿರ್ಗಮನ ದ್ವಾರಗಳು ಸ್ಪಷ್ಟವಾಗಿ ಗೋಚರಿಸುವಂತೆ ಗುರುತಿಸಬೇಕು.
ಶಾಲೆಯ ಎಲ್ಲ ಕಾರಿಡಾರ್‌ಗಳು ಎಲ್ಲ ಸಮಯದಲ್ಲೂ ಅಡೆತಡೆಗಳಿಂದ ಮುಕ್ತವಾಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು.
ಶಾಲಾ ಕಾರಿಡಾರ್‌ಗಳು ಮತ್ತು ಮೆಟ್ಟಿಲುಗಳಲ್ಲಿ ನೀರು ಶೇಖರಣೆಯಾಗಿದೆಯೇ ಎಂಬುದನ್ನು ನಿಯಮಿತವಾಗಿ ಪರಿಶೀಲಿಸಬೇಕು.
ವಿದ್ಯುತ್ ವೈರಿಂಗ್‌ಗಳು ಮತ್ತು ಉಪಕರಣಗಳು ಸೇರಿ ಫಿಟ್ಟಿಂಗ್‌ಗಳನ್ನು ಪರಿಶೀಲಿಸಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳನ್ನು ತಡೆಯಲು ಎಲ್ಲ ರೀತಿಯ ಸುರಕ್ಷತಾ ಮಾನದಂಡಗಳನ್ನು ಅನುಸರಿಸಬೇಕು.
ಅಗತ್ಯವಿರುವ ಎಲ್ಲ ಅಗ್ನಿ ಸುರಕ್ಷತಾ ಕ್ರಮಗಳನ್ನು ಹೊಂದಿರಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.